21ರಂದು ರಾಜ್ಯ ಕೋರ್ ಕಮಿಟಿ ಸಭೆ: ವಿಜಯೇಂದ್ರ
ಬೆಂಗಳೂರು: ನಾಳೆ (ಜ.21) ಸಂಜೆ 7 ಗಂಟೆಗೆ ಬಿಜೆಪಿ ರಾಜ್ಯದ ಕೋರ್ ಕಮಿಟಿ ಸಭೆ ನಡೆಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.
ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಬಿಜೆಪಿ ಉಸ್ತುವಾರಿ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾಮೋಹನ್ ದಾಸ್ ಅಗರವಾಲ್, ತಮಿಳುನಾಡಿನಿಂದ ಪೊನ್ನು ರಾಧಾಕೃಷ್ಣನ್, ರಾಜ್ಯದ ಸಹ ಉಸ್ತುವಾರಿ ಸುಧಾಕರ ರೆಡ್ಡಿ ಅವರು ನಾಳೆ ಬೆಂಗಳೂರಿಗೆ ಬರಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರನ್ನು ಒಳಗೊಂಡ ನಮ್ಮ ಚುನಾಯಿತ ಪ್ರತಿನಿಧಿಗಳ ಸಭೆ ನಡೆಯಲಿದೆ ಎಂದರು.
ಅಲ್ಲಿ ಅವರ ಅಭಿಪ್ರಾಯ ಪಡೆಯಲಿದ್ದಾರೆ. ಸಂಘಟನೆ ಸಂಬಂಧ ಚರ್ಚಿಸಲಿದ್ದಾರೆ. 4 ಗಂಟೆಗೆ ರಾಜ್ಯದಲ್ಲಿ ನಡೆಯುತ್ತಿರುವ ಸಂಘಟನಾ ಪರ್ವದ ಕುರಿತು ಚರ್ಚೆ ನಡೆಸಲಿದ್ದಾರೆ. ಮಂಡಲ ಅಧ್ಯಕ್ಷರ ಚುನಾವಣೆ ನಡೆದಿದೆ. ಜಿಲ್ಲಾಧ್ಯಕ್ಷರ ನಿಯೋಜನೆ ಪ್ರಕ್ರಿಯೆ ನಡೆಯುತ್ತಿದೆ. ರಾಜ್ಯಾಧ್ಯಕ್ಷರ ಚುನಾವಣೆ ಬಗ್ಗೆ ಕೂಡ ಚರ್ಚೆ ನಡೆಯಲಿದೆ ಎಂದು ವಿವರಿಸಿದರು. ಪಕ್ಷದ ಚುನಾವಣಾ ಅಧಿಕಾರಿಗಳು, ಸಹ ಅಧಿಕಾರಿಗಳು, 13 ಜನ ಮೇಲ್ವಿಚಾರಕರ ಸಭೆಯೂ ನಡೆಯಲಿದೆ ಎಂದು ತಿಳಿಸಿದರು.
ಈ 3 ಸಭೆಗಳಲ್ಲಿ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು ಭಾಗವಸಲಿದ್ದಾರೆ. ರಾಜ್ಯದ ಪರಿಸ್ಥಿತಿ, ಸಂಘಟನಾ ವಿಚಾರವಾಗಿ, ರಾಜ್ಯದ ಅಧ್ಯಕ್ಷರ ವಿಚಾರವಾಗಿ ಎಲ್ಲವೂ ಕೂಡ ಸಮಗ್ರವಾಗಿ ನಾಳೆ ಚರ್ಚೆ ಆಗಲಿದೆ ಎಂದು ಪ್ರಕಟಿಸಿದರು.
ರಾಜ್ಯದ ಪೊಲೀಸ್ ವ್ಯವಸ್ಥೆ ಬಗ್ಗೆ ವಿಶ್ವಾಸ ಕಳಕೊಳ್ಳುತ್ತಿರುವ ಜನತೆ: ವಿಜಯೇಂದ್ರ
ಬೆಂಗಳೂರು: ರಾಜ್ಯದ ಕಾನೂನು- ಸುವ್ಯವಸ್ಥೆ ಕುಸಿತದಿಂದ ಪೊಲೀಸ್ ವ್ಯವಸ್ಥೆ ಬಗ್ಗೆ ಜನತೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ವಿಶ್ಲೇಷಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಇಂದು ಮಾತನಾಡಿದ ಅವರು, ಹೊನ್ನಾವರದಲ್ಲಿ ಗೋವಿನ ರುಂಡ ಕತ್ತರಿಸಿ, ಅಮಾನುಷ- ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಅದರ ಜೊತೆಗೇ ಬಿಜಾಪುರದಲ್ಲಿ ಹಾಡಹಗಲಲ್ಲೇ ವ್ಯಕ್ತಿಯನ್ನು ಥಳಿಸಿದ ಘಟನೆ ನಡೆದಿದೆ ಎಂದು ಕಳವಳ ವ್ಯಕ್ತಪಡಿಸಿದರು. ಈಚೆಗೆ ಚಾಮರಾಜಪೇಟೆಯಲ್ಲೂ ಹಸುವಿನ ಕೆಚ್ಚಲು ಕತ್ತರಿಸಿದ ಘಟನೆ ನಡೆದಿತ್ತು. ಅದು ರಾಜ್ಯಾದ್ಯಂತ ಮಾತ್ರವಲ್ಲದೆ, ದೇಶಾದ್ಯಂತ ಸುದ್ದಿಯಾಗಿದೆ ಎಂದು ಗಮನ ಸೆಳೆದರು.
ಕಾನೂನು- ಸುವ್ಯವಸ್ಥೆ ಸರಿಯಾಗಿದೆ ಎಂಬಂತೆ ರಾಜ್ಯದ ಗೃಹ ಸಚಿವರು ಬಿಂಬಿಸುತ್ತಿದ್ದಾರೆ. ಸಿದ್ದರಾಮಯ್ಯನವರ ಈ ಕಾಂಗ್ರೆಸ್ ಸರಕಾರವು ಎಲ್ಲೋ ಒಂದು ಕಡೆ ಈ ಥರ ಘಟನೆಗಳು ನಡೆದಾಗ ಮೃದು ಧೋರಣೆ ಅನುಸರಿಸುತ್ತದೆ. ದೇಶದ್ರೋಹಿಗಳು, ಹಿಂದೂ ವಿರೋಧಿ ಶಕ್ತಿಗಳು ರಾಜ್ಯದಲ್ಲಿ ಕೆಲಸ ಮಾಡುತ್ತಿದ್ದು, ಇವರಿಗೆ ಭಯವೇ ಇಲ್ಲವಾಗಿದೆ ಎಂದು ಟೀಕಿಸಿದರು.
ರಾಜ್ಯ ಸರಕಾರ, ಮುಖ್ಯಮಂತ್ರಿಗಳು, ಗೃಹ ಸಚಿವರು ಎಚ್ಚತ್ತುಕೊಳ್ಳಬೇಕಿದೆ ಎಂದು ಆಗ್ರಹಿಸಿದರು. ಒಂದೆಡೆ ಕಾನೂನು- ಸುವ್ಯವಸ್ಥೆ ಹದಗೆಟ್ಟಿದೆ. ಇನ್ನೊಂದೆಡೆ ರಾಜ್ಯದಲ್ಲಿ ಕೋಮು ಸೌಹಾರ್ದತೆ ಹಾಳಾಗುವ ವಾತಾವರಣ ನಿರ್ಮಾಣವಾಗುತ್ತಿದೆ. ಇದರ ಕುರಿತು ಗೃಹ ಸಚಿವರು, ಮುಖ್ಯಮಂತ್ರಿಗಳು ಈಗಲಾದರೂ ಎಚ್ಚತ್ತುಕೊಳ್ಳಲಿ ಎಂದು ಒತ್ತಾಯಿಸಿದರು.
ಪ್ರಶ್ನೆಗೆ ಉತ್ತರಿಸಿದ ಅವರು, ಈ ಸರಕಾರ ಬಂದ ಮೇಲೆ ಕಳೆದೊಂದು ವರ್ಷದಲ್ಲಿ ಈ ರೀತಿಯ ಘಟನೆ ನಡೆಯುತ್ತಿದೆ. ಗೋಹತ್ಯೆ ನಿಷೇಧ ಸಂಬಂಧ ರಾಜ್ಯ ಸರಕಾರದ ನಿಲುವು ಬಯಲಾಗಿದೆ. ಮತ್ತೊಂದು ಕಡೆ ಬಿಜಾಪುರದಲ್ಲಿ ಕಾರ್ಮಿಕನನ್ನು ಥಳಿಸಿದ್ದು, ಮನುಷ್ಯತ್ವ ಇರುವವರು ಈ ರೀತಿ ನಡೆದುಕೊಳ್ಳಲು ಸಾಧ್ಯವಿಲ್ಲ ಎಂದು ವಿಶ್ಲೇಷಿಸಿದರು. ದುಷ್ಟರನ್ನು ಒದ್ದು ಒಳಗೆ ಹಾಕಿ ಕಾನೂನು ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು.
ಬಿಜೆಪಿ- ಜೆಡಿಎಸ್‍ನಿಂದ 30 ಜನ ಶಾಸಕರು ಕಾಂಗ್ರೆಸ್ಸಿಗೆ ಸೇರುವ ಕುರಿತ ಹೇಳಿಕೆ ಬಗ್ಗೆ ಪತ್ರಕರ್ತರು ಗಮನ ಸೆಳೆದರು. ಮುಡಾ ವಿಚಾರದಲ್ಲಿನ ಬೆಳವಣಿಗೆಗಳು, ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಆಗುವ ಕುರಿತ ಹಪಾಹಪಿ, ಇವರ ಗುದ್ದಾಟ, ಜಗ್ಗಾಟ ಬಹಿರಂಗವಾಗಿದೆ. ದಿನನಿತ್ಯ ಟಿವಿ, ಪತ್ರಿಕೆಗಳಲ್ಲಿ ಇದನ್ನು ನೋಡುತ್ತಿದ್ದೇವೆ. ಅದನ್ನು ಉಳಿಸಿಕೊಂಡರೆ ಸಾಕಾಗಿದೆ. ಅಭಿವೃದ್ಧಿಗೆ ಅನುದಾನವಿಲ್ಲದೇ ಆಡಳಿತ ಪಕ್ಷದ ಶಾಸಕರೇ ಪರದಾಡುತ್ತಿದ್ದಾರೆ. ಇದರ ಮಧ್ಯೆ ಬಿಜೆಪಿ- ಜೆಡಿಎಸ್‍ನಿಂದ ಶಾಸಕರನ್ನು ಅವರ ಪಕ್ಷಕ್ಕೆ ಕರೆದುಕೊಂಡು ಇವರೇನು ಕಡಿಯಲಿಕ್ಕಿದೆ ಎಂದು ಕೇಳಿದರು.
ಇರುವ ಶಾಸಕರನ್ನು ಉಳಿಸಿಕೊಳ್ಳಲು ಸವಾಲು
ಅವರು ಇರುವ ಶಾಸಕರನ್ನು ಉಳಿಸಿಕೊಳ್ಳಲಿ. ಅಭಿವೃದ್ಧಿ ಬಗ್ಗೆ ಗಮನ ಕೊಡಲಿ. ನಮ್ಮ ಕ್ಷೇತ್ರಗಳ ಅಭಿವೃದ್ಧಿಗೆ ಹಣ ಕೊಡಲಿ; 136 ಶಾಸಕರು ಈಗಾಗಲೇ ಆಡಳಿತ ಪಕ್ಷದಲ್ಲಿದ್ದು, ಇನ್ನು ಬಿಜೆಪಿ- ಜೆಡಿಎಸ್‍ನಿಂದ ಕರೆದುಕೊಂಡು ಏನು ಮಾಡಲಿದ್ದಾರೆ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಎಂ.ಬಿ.ಪಾಟೀಲ್ ಆದಿಯಾಗಿ ಹೇಳಿಕೆ ಕೊಡುವ ಎಲ್ಲರಿಗೂ ಎಚ್ಚರಿಕೆ ಇರಬೇಕು. ಮೊದಲು ಅವರು ಇರುವ ಶಾಸಕರನ್ನು ಉಳಿಸಿಕೊಳ್ಳಲಿ ಎಂದು ಸವಾಲೆಸೆದರು.
ಪಕ್ಷದ ರಾಜ್ಯಾಧ್ಯಕ್ಷನಾಗಿ ಕೆಲಸ ಮಾಡಲು ಬಂದಿದ್ದೇನೆ. ಕೆಲಸ ಮಾಡುತ್ತಿದ್ದೇನೆ. ಕೆಲಸ ಇಲ್ಲದೇ ಮಾತನಾಡುವುದರ ಕುರಿತು ಹೇಳಿಕೆ ಕೊಡಲು ಹೋಗುವುದಿಲ್ಲ ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು.
(ಕರುಣಾಕರ ಖಾಸಲೆ)
ಮಾಧ್ಯಮ ಸಂಚಾಲಕರು
ಬಿಜೆಪಿ ಕರ್ನಾಟಕ
Post a Comment