ಇಂಗ್ಲಿಷ್‍ನಲ್ಲಿದ್ದ ಪ್ರಶ್ನೆಯನ್ನು ಗೂಗಲ್ ಮೂಲಕ ಭಾಷಾಂತರಕೆಪಿಎಸ್ಸಿ ವಿಷಯದಲ್ಲಿ ಯುವಜನರ ಜೊತೆ ಆಟ:ಛಲವಾದಿ ನಾರಾಯಣಸ್ವಾಮಿ ಆಕ್ಷೇಪ



ಇಂಗ್ಲಿಷ್‍ನಲ್ಲಿದ್ದ ಪ್ರಶ್ನೆಯನ್ನು ಗೂಗಲ್ ಮೂಲಕ ಭಾಷಾಂತರ
ಕೆಪಿಎಸ್ಸಿ ವಿಷಯದಲ್ಲಿ ಯುವಜನರ ಜೊತೆ ಆಟ:
ಛಲವಾದಿ ನಾರಾಯಣಸ್ವಾಮಿ ಆಕ್ಷೇಪ

ಬೆಂಗಳೂರು: ಕೆಪಿಎಸ್ಸಿ ಪರೀಕ್ಷೆ ವಿಷಯದಲ್ಲಿ ಸರಕಾರವು ಯುವಜನರ ಜೊತೆ ಯಾಕೆ ಆಟ ಆಡುತ್ತಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಪ್ರಶ್ನಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ತಮ್ಮ ಭವಿಷ್ಯ ಕಂಡುಕೊಳ್ಳಲು ಹಲವು ಯುವಕರು ಕೆಪಿಎಸ್ಸಿಯಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. ಕಳೆದ ಬಾರಿ ಪ್ರಿಲಿಮಿನರಿ ಪರೀಕ್ಷೆ ನಡೆದಾಗ 200 ಪ್ರಶ್ನೆಗಳಲ್ಲಿ 57 ಪ್ರಶ್ನೆಗಳು ಕನ್ನಡದಲ್ಲಿ ತಪ್ಪಾಗಿ ಮುದ್ರಣ ಆಗಿತ್ತು. ಅದರಿಂದ ಬಹಳ ಜನರಿಗೆ ಅನ್ಯಾಯ ಆಗಿದ್ದು, ಹೋರಾಟವೂ ನಡೆದಿತ್ತು ಎಂದರು.
ಈಗ ಕಳೆದ ವಾರ ಮತ್ತೆ ಪರೀಕ್ಷೆ ನಡೆದಿದೆ. ಈ ಪರೀಕ್ಷೆಯಲ್ಲಿ 200 ಪ್ರಶ್ನೆಗಳ ಪೈಕಿ 33 ಪ್ರಶ್ನೆಗಳು ತಪ್ಪಾಗಿ ಮುದ್ರಣಗೊಂಡಿವೆ. ಆಂಗ್ಲ ಭಾಷೆಯ ಪ್ರಶ್ನೆಗಳು ಕನ್ನಡದಲ್ಲಿ ಅರ್ಥವೇ ಆಗದಂತಿದ್ದು, ಪ್ರಶ್ನೆಯ ರೀತಿಯಲ್ಲಿ ಇರಲಿಲ್ಲ ಎಂದು ಆಕ್ಷೇಪಿಸಿದರು.
ಈ ಸರಕಾರಕ್ಕೆ ಕನ್ನಡವೂ ಬರುವುದಿಲ್ಲ; ಇದು ಮುಖ್ಯಮಂತ್ರಿಗಳ ಪರಿಧಿಯಲ್ಲಿ ಬರುವ ವಿಷಯ. ಇದರ ಬಗ್ಗೆ ಮುಖ್ಯಮಂತ್ರಿಗಳಿಗೆ ಯಾವುದೇ ಕಾಳಜಿ ಇಲ್ಲ ಎಂದು ಟೀಕಿಸಿದರು. ಕೆಪಿಎಸ್ಸಿಯಲ್ಲಿ ಇಂಗ್ಲಿಷ್‍ನಲ್ಲಿದ್ದ ಪ್ರಶ್ನೆಯನ್ನು ಗೂಗಲ್ ಮೂಲಕ ಭಾಷಾಂತರ ಮಾಡುತ್ತಾರೆ. ಇವರಿಗೆ ಕನ್ನಡ ಬರುವುದಿಲ್ಲವೇ ಎಂದು ಪ್ರಶ್ನಿಸಿದರು.
ಕೆಪಿಎಸ್ಸಿಗೆ ನೇಮಿಸಿದ ಅಧಿಕಾರಿ ಕರ್ನಾಟಕದವರಲ್ಲ; ಅವರಿಗೆ ಕನ್ನಡ ಬರುವುದಿಲ್ಲ; ಮತ್ತೆ ಪ್ರಶ್ನೆಪತ್ರಿಕೆ ತಯಾರಿಸುವವರು ಯಾರು? ಎಂದರಲ್ಲದೆ, ಪ್ರಶ್ನೆಪತ್ರಿಕೆಯನ್ನು ಪರಿಶೀಲನೆಗೆ ಕೊಟ್ಟರೆ ಪೇಪರ್ ಔಟ್ ಆಗುವುದಾಗಿ ಅನೇಕಬಾರಿ ಹೇಳಿದ್ದಾಗಿ ಗಮನ ಸೆಳೆದರು.
ಒಂದೇ ಪ್ರಶ್ನೆಗೆ ತಪ್ಪು ಉತ್ತರ ಕೊಟ್ಟರೆ ಸಾವಿರಾರು ನಂಬರ್ ಹಿಂದಕ್ಕೆ ಹೋಗುತ್ತಾರೆ. ಇದರ ತೀಕ್ಷ್ಣತೆ ಸರಕಾರಕ್ಕೆ ಯಾಕೆ ಅರ್ಥ ಆಗಿಲ್ಲ ಎಂದು ಆಕ್ಷೇಪಿಸಿದರು. 33 ಪ್ರಶ್ನೆಗೆ ಉತ್ತರಿಸಲಾಗದೆ ಇದ್ದರೆ ಉತ್ತೀರ್ಣರಾಗುವುದು ಹೇಗೆ ಎಂದು ಕೇಳಿದರು.
ಪರೀಕ್ಷಾರ್ಥಿಗಳು ಬೀದಿಗೆ ಇಳಿಯುವಂತಾಗಿದೆ. ವಯೋಮಿತಿ ಮೀರಿದರೆ ಕೆಲಸವೂ ಸಿಗುವುದಿಲ್ಲ ಎಂದ ಅವರು, ಹಾರಿಕೆಯ ಉತ್ತರ ನೀಡುವ ಸರಕಾರದ ಕ್ರಮವನ್ನು ಖಂಡಿಸಿದರು. ಇಂಗ್ಲಿಷ್- ಕನ್ನಡದ ಪ್ರಶ್ನೆಗಳ ಅರ್ಥ ಬೇರೆ ಬೇರೆ ಎಂದು ಆಕ್ಷೇಪ ಹೊರಹಾಕಿದರು.
ಮೈನ್ಸ್‍ಗೆ ಎಲ್ಲರಿಗೂ ಅವಕಾಶ ಕೊಡಿ; ನಾವು ಅಲ್ಲಿ ಫೇಲ್ ಆದರೆ, ಅದನ್ನು ಪ್ರಶ್ನಿಸುವುದಿಲ್ಲ ಎಂದು ಆಕಾಂಕ್ಷಿ ಯುವಕರು ತಿಳಿಸಿದ್ದಾರೆ ಎಂದು ಹೇಳಿದರು. ಇಲ್ಲವಾದರೆ ಇದನ್ನು ಸಂಪೂರ್ಣ ರದ್ದು ಪಡಿಸಿ ಮರುಪರೀಕ್ಷೆ ಮಾಡಲು ಪರೀಕ್ಷಾರ್ಥಿಗಳು ಬೇಡಿಕೆ ಮುಂದಿಟ್ಟಿದ್ದಾರೆ. ಇದನ್ನು ಪರಿಶೀಲಿಸಿ ಮುಖ್ಯಮಂತ್ರಿಗಳು ಉತ್ತರ ನೀಡಬೇಕೆಂದು ಮನವಿ ಮಾಡಿದರು.



       

Post a Comment

Previous Post Next Post