(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)ಜಗತ್ತಿನ ಅತಿದೊಡ್ಡ ಸೇನಾ ಹಾಗೂ ಆರ್ಥಿಕ ಶಕ್ತಿ ಮತ್ತು ಅಂತಾರಾಷ್ಟ್ರೀಯ ರಾಜಕಾರಣದ ಪ್ರಮುಖ ಪ್ರಭಾವಶಾಲಿ ದೇಶವಾದ ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಜೆ. ಟ್ರಂಪ್ ನಾಲ್ಕು ವರ್ಷಗಳ ಅಂತರದ ನಂತರ ಮತ್ತೆ ಶ್ವೇತಭವನ ಪ್ರವೇಶಿಸಿದ್ದಾರೆ.

 (ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ಜಗತ್ತಿನ ಅತಿದೊಡ್ಡ ಸೇನಾ ಹಾಗೂ ಆರ್ಥಿಕ ಶಕ್ತಿ ಮತ್ತು ಅಂತಾರಾಷ್ಟ್ರೀಯ ರಾಜಕಾರಣದ ಪ್ರಮುಖ ಪ್ರಭಾವಶಾಲಿ ದೇಶವಾದ ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಜೆ. ಟ್ರಂಪ್ ನಾಲ್ಕು ವರ್ಷಗಳ ಅಂತರದ ನಂತರ ಮತ್ತೆ ಶ್ವೇತಭವನ ಪ್ರವೇಶಿಸಿದ್ದಾರೆ.

2017-21ರ ಮೊದಲ ಅವಧಿಯಲ್ಲಿ ಅವರು ಕಾರ್ಯನಿರ್ವಹಿಸಿದ ರೀತಿ ಮತ್ತು ಈ ಬಾರಿಯ ಚುನಾವಣಾ ಪ್ರಚಾರ ಹಾಗೂ ಎರಡೂವರೆ ತಿಂಗಳ ಹಿಂದೆ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ತಮ್ಮ ಯೋಜನೆಗಳ ಬಗ್ಗೆ ಅವರು ನೀಡುತ್ತ ಬಂದ ಹೇಳಿಕೆಗಳ ಆಧಾರದ ಮೇಲೆ ಅವರ ಎರಡನೆಯ ಅಧ್ಯಕ್ಷಾವಧಿ ಅಮೆರಿಕ ಮತ್ತು ಜಗತ್ತಿನಲ್ಲಿ ಎಂತಹ ಬದಲಾವಣೆಗಳನ್ನು ತರಬಹುದು ಎಂಬುದರ ಒಂದು ಪೂರ್ವನೋಟ ಎರಡು ಭಾಗಗಳ ಈ ಲೇಖನದ ವಸ್ತುವಿಷಯ.

ಡೊನಾಲ್ಡ್ ಟ್ರಂಪ್ ಒಬ್ಬರು ವ್ಯವಹಾರಸ್ಥ ಮತ್ತು ಅದರಲ್ಲಿ ಏರಿಳಿತಗಳನ್ನು ಮತ್ತೆ ಮತ್ತೆ ಕಂಡವರು, ವೈಫಲ್ಯದ ಕಾರಣಗಳನ್ನು ಗುರುತಿಸಿ ಅವುಗಳನ್ನು ಸರಿಪಡಿಸಿಕೊಂಡು ಮತ್ತೆ ಮೇಲೆದ್ದ ವಿವೇಕಿ ಅವರು. ರಾಜಕಾರಣದಲ್ಲೂ ಅವರದು ಅದೇ ಜಾಯಮಾನವಾಗಿರುವಂತಿದೆ. ಎಂಟು ವರ್ಷಗಳ ಹಿಂದೆ ಮೊದಲಿಗೆ ಅಧ್ಯಕ್ಷರಾದಾಗ ಅವರಿಗೆ ರಾಜಕಾರಣ ಹೊಸದು. ತಮ್ಮ ನೀತಿನಿಲುವುಗಳ ಬಗ್ಗೆ ಸ್ಪಷ್ಟ ವಿಚಾರಗಳು ಅವರಲ್ಲಿದ್ದರೂ ಅವುಗಳನ್ನು ಕಾರ್ಯಗತಗೊಳಿಸಲು ಸೂಕ್ತ ಸಹಾಯಕರು ಯಾರೆಂದು ಗುರುತಿಸಲು ಅವರು ಮತ್ತೆಮತ್ತೆ ವಿಫಲರಾಗುತ್ತಿದ್ದುದನ್ನು ಕಂಡಿದ್ದೇವೆ. ಹೀಗಾಗಿಯೇ ವಿವಿಧ ಇಲಾಖೆಗಳ ಕಾರ್ಯದರ್ಶಿಗಳು (ನಮ್ಮಲ್ಲಿ ಮಂತ್ರಿಗಳು) ಮತ್ತೆಮತ್ತೆ ಬದಲಾಗುತ್ತಿದ್ದುದು, ತಮ್ಮ ಕೆಲವೊಂದು ನೀತಿಗಳನ್ನು ಅವರು ಬದಲಿಸಿಕೊಂಡು, ವಿವಾದಗಳಿಗೆ ಸಿಲುಕಿದ್ದು, ಅಂತಿಮವಾಗಿ ನಾಲ್ಕು ವರ್ಷಗಳ ಹಿಂದೆ ಗೆಲ್ಲುತ್ತ ಗೆಲ್ಲುತ್ತ ಸೋತುಹೋದದ್ದು ಅಥವಾ ಸೋಲಿಸಲ್ಪಟ್ಟದ್ದು.

ಆ ದಿನಗಳನ್ನು ಅವರು ಹಿಂದೆ ಹಾಕಿ ಬಂದಿದ್ದಾರೆ, ತಮ್ಮ ಯೋಜನೆಗಳನ್ನು ಜಾರಿಗೆ ತರುವಲ್ಲಿ ಸರಿಯಾದ ಸಹಕಾರ ನೀಡಬಲ್ಲವರನ್ನು ಗುರುತಿಸಿಕೊಂಡಿದ್ದಾರೆ, ಸಮರ್ಥ ತಂಡವನ್ನು ಕಟ್ಟಿಕೊಂಡು ಶ್ವೇತಭವನ ಪ್ರವೇಶಿಸಿದ್ದಾರೆ. ವಿದೇಶಾಂಗ ಕಾರ್ಯದರ್ಶಿ ಮಾಕೋ ರೂಬಿಯೋ ಮತ್ತು ರಾಷ್ಟ್ರೀಯ ಸುರಕ್ಷಾ ಸಲಹೆಗಾರ ಮೈಕ್ ವಾಲ್ಝ್ ಅವರಂತೂ ಸಮಕಾಲೀನ ಜಗತ್ತಿನ ಕುರಿತಾಗಿ ಮುಖ್ಯವಾಗಿ ಚೀನಾದ ಬಗ್ಗೆ ಟ್ರಂಪ್ ಅವರಲ್ಲಿರುವಂತಹದೇ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಟ್ರಂಪ್​ರ ಶ್ವೇತಭವನ ಮುಂದಿನ ನಾಲ್ಕು ವರ್ಷಗಳಲ್ಲಿ ಜಗತ್ತಿನೊಂದಿಗೆ ಹೇಗೆ ವರ್ತಿಸುತ್ತದೆ ಎಂದು ಲೆಕ್ಕಹಾಕಲು ಇದರಿಂದ ಸಾಧ್ಯವಾಗುತ್ತದೆ. ಇಷ್ಟಾಗಿಯೂ, ಟ್ರಂಪ್ ಮತ್ತವರ ಕಾರ್ಯದರ್ಶಿಗಳೂ ಹಾಗೂ ಸಹಯೋಗಿಗಳು ಹಾಕಿದ ಗೆರೆಯಲ್ಲೇ ಜಗತ್ತು ಹೆಜ್ಜೆಹಾಕುತ್ತದೆ ಎಂದು ಹೇಳಲಾಗುವುದಿಲ್ಲ. ಕೆಲವೊಂದು ವಿಷಯಗಳಲ್ಲಿ ಟ್ರಂಪ್ ಆಡಳಿತದ ನೀತಿಗಳಿಗೆ ಇತರ ಪ್ರಮುಖ ದೇಶಗಳ ಪ್ರತಿಕ್ರಿಯೆಗಳು ಹೇಗಿರುತ್ತವೆನ್ನುವುದೂ ಜಾಗತಿಕ ರಾಜಕಾರಣದ ದಿಕ್ಕನ್ನು ನಿರ್ದೇಶಿಸುವಲ್ಲಿ ಗಮನಾರ್ಹ ಪಾತ್ರ ವಹಿಸುತ್ತವೆ.

ಅಷ್ಟೇಕೆ, ಅವು ಟ್ರಂಪ್ ಅವರೇ ತಮ್ಮ ನೀತಿಗಳನ್ನು ಬದಲಾಯಿಸಿಕೊಳ್ಳುವಂತೆ ಮಾಡಲೂಬಹುದು. ಉದಾಹರಣೆಗೆ ತಮ್ಮ ಮೊದಲ ಅವಧಿಯಲ್ಲಿ ವಿಶ್ವ ವ್ಯಾಪಾರ ವ್ಯವಸ್ಥೆ ಕುರಿತಾಗಿನ ಟ್ರಂಪ್ ಅವರ ನೀತಿಯನ್ನು ತೆಗೆದುಕೊಳ್ಳಬಹುದು. ತಾವು ಅಧಿಕಾರಕ್ಕೆ ಬಂದದ್ದೇ ಆಗ ಟ್ರಂಪ್ ಘೊಷಿಸಿದ ಮೊದಲ ನೀತಿಗಳಲ್ಲಿ ಡಬ್ಲ್ಯೂಟಿಓದಿಂದ ಅಮೆರಿಕವನ್ನು ಹೊರಗೊಯ್ಯುವುದೂ ಒಂದಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಚೀನೀ ಅಧ್ಯಕ್ಷ ಷಿ ಜಿನ್​ಪಿಂಗ್, ಅಮೆರಿಕ ತೆರವು ಮಾಡುವ ಸ್ಥಾನವನ್ನು ತುಂಬಲು ಚೀನಾ ತಯಾರಾಗಿರುವುದೆಂದು ಹೇಳಿದರು! ಆಗ ಟ್ರಂಪ್​ರಿಗೆ ತಮ್ಮ ಯೋಜನೆ ವ್ಯಾವಹಾರಿಕವಲ್ಲ ಎಂದರಿವಾಯಿತು. ಅಮೆರಿಕ ತೆರವು ಮಾಡುವ ಸ್ಥಾನವನ್ನು ಚೀನಾ ತುಂಬುವುದೆಂದರೆ ಜಾಗತಿಕ ಅರ್ಥವ್ಯವಸ್ಥೆಯ ನಾಯಕತ್ವ ಚೀನಾಗೆ ದಕ್ಕಿದಂತೆ, ಏಷ್ಯಾ ಮತ್ತು ಆಫ್ರಿಕಾಗಳಲ್ಲದೆ ಆಗ್ನೇಯ ಯೂರೋಪ್​ನ ದೇಶಗಳನ್ನೂ ತನ್ನ ಸಾಲ ಸಂಕೋಲೆಯಲ್ಲಿ ಸಿಲುಕಿಸಿಕೊಳ್ಳುತ್ತ ನವವಸಾಹತುಶಾಹಿವಾದವನ್ನು ಹುಟ್ಟುಹಾಕಲು ಆರಂಭಿಸಿದ್ದ ಷಿ ಜಿನ್​ಪಿಂಗ್​ರ ಚೀನಾಗೆ ಜಾಗತಿಕ ಅರ್ಥವ್ಯವಸ್ಥೆಯ ನಾಯಕತ್ವ ಹೀಗೆ ಸುಲಭವಾಗಿ ಸಿಕ್ಕಿಬಿಟ್ಟರೆ ಅದು ಜಗತ್ತಿಗಷ್ಟೇ ಅಲ್ಲ, ಅಂತಿಮವಾಗಿ ಅಮೆರಿಕಕ್ಕೂ ಹಾನಿಕಾರಕ ಎಂದರಿವಾದದ್ದೇ ಟ್ರಂಪ್ ತಮ್ಮ ನಿಲುವನ್ನು ಬದಲಾಯಿಸಿಕೊಂಡರು.

ಅಷ್ಟೇ ಅಲ್ಲ, ಈ ಪ್ರಕರಣದಿಂದಾಗಿ ಅವಕಾಶ ದೊರೆತರೆ ಚೀನಾ ಅದೆಂತಹ ದುಸ್ಸಾಹಸಕ್ಕೆ ಮನಸ್ಸುಮಾಡಬಹುದು ಮತ್ತು ಅದರಿಂದಾಗಿ ಜಗತ್ತಿಗೆ ಅದೆಷ್ಟು ಹಾನಿಯಾಗಬಹುದು ಎಂದೂ 'ಜಾಣ ವ್ಯವಹಾರಸ್ಥ' ಟ್ರಂಪ್ ತಕ್ಷಣವೇ ಗುರುತಿಸಿಬಿಟ್ಟರು. ಸಾಲ ಸಂಕೋಲೆಯ ಮೂಲಕ ನವವಸಾಹತುವಾದದ ಕನಸನ್ನು ಚೀನಾ ಮತ್ತೆಂದೂ ಕಾಣದ ಹಾಗೆ ಮಾಡಲು ಆ ದೇಶದ ಮೇಲೆ ಆರ್ಥಿಕ ಸಮರ ಸಾರಿ ಚೀನೀ ಆದಾಯವನ್ನು ಗಮನಾರ್ಹವಾಗಿ ಕುಗ್ಗಿಸಿದರು. ಪರಿಣಾಮವಾಗಿ ಚೀನಾದ ಸಾಲ ಸಂಕೋಲೆ ನೀತಿಗೂ ಹೊಡೆತ ಬಿದ್ದು ಅದರ ನವವಸಾಹತುವಾದ ಗಮನಾರ್ಹವಾಗಿ ಕುಂಠಿತಗೊಂಡಿತು. ಅದರೊಂದಿಗೆ ಚೀನಾದ ಸೇನಾ ಸಾಮರ್ಥ್ಯವೂ ಕುಗ್ಗತೊಡಗಿತು. ಟ್ರಂಪ್​ರ ಈ ನೀತಿಗಳು ಜಗತ್ತನ್ನು ಅದೆಂತಹ ಸಂಕಷ್ಟದಿಂದ ಕಾಪಾಡಿದವು ಎನ್ನುವುದನ್ನು ಕರೊನಾ ಸಂಕ್ರಮಣ ಕಾಲದಲ್ಲಿ ನಾವು ನೋಡಿದೆವು. ಈ ಹಿನ್ನೆಲೆಯೊಂದಿಗೆ, ತಮ್ಮ ಎರಡನೆಯ ಅವಧಿಯಲ್ಲಿ ಟ್ರಂಪ್ ಜಗತ್ತಿನೊಂದಿಗೆ ಹೇಗೆ ವರ್ತಿಸಬಹುದೆಂಬ ಮತ್ತು ಅದರಿಂದಾಗಿ ಆಗಬಹುದಾದ ಸಾಧಕಬಾಧಕಗಳ ಚಿತ್ರಣವನ್ನು ಕಟ್ಟಿಕೊಳ್ಳಲು ಪ್ರಯತ್ನಿಸೋಣ.

ಉತ್ತರ ಅಮೆರಿಕ ಖಂಡದಲ್ಲಿ ಗಡಿಗಳನ್ನು ಬದಲಾಯಿಸುವ ಸೂಚನೆಯನ್ನು ಟ್ರಂಪ್ ಮತ್ತೆಮತ್ತೆ ನೀಡುತ್ತಲೇ ಇರುವುದನ್ನು ಕೇಳುತ್ತಲೇ ಇದ್ದೇವೆ. ಮೊದಲಿಗೆ ಕೆನಡಾ ಮತ್ತು ಮೆಕ್ಸಿಕೋಗಳಿಂದ ಆಮದಾಗುವ ವಸ್ತುಗಳ ಮೇಲೆ 25% ಸುಂಕ ವಿಧಿಸುವ ಮಾತನ್ನು ಟ್ರಂಪ್ ತಮ್ಮ ಚುನಾವಣಾ ವಿಜಯದ ಕೆಲದಿನಗಳಲ್ಲೇ ಆಡತೊಡಗಿದ್ದನ್ನು ನೆನಪಿಸಿಕೊಳ್ಳಿ. ಆ ಎರಡೂ ದೇಶಗಳ ಜತೆಗಿನ ವ್ಯಾಪಾರದಲ್ಲಿ 'ಸಂದಾಯ ಬಾಕಿ' ಅಮೆರಿಕಕ್ಕೇ ಭಾರಿ ಪ್ರಮಾಣದಲ್ಲಿ ಅನಾನುಕೂಲಕರವಾಗಿರುವುದನ್ನು ತಡೆಯುವುದು ಟ್ರಂಪ್​ರ ನಿಲುವಿನ ಹಿಂದಿರುವ ಉದ್ದೇಶ. ಟ್ರಂಪ್ ಹಾಗೆ ಮಾಡಿದಲ್ಲಿ ಅದರಿಂದ ಕೆನಡಾದ ರಫ್ತಿನ ಮೇಲೆ ಹೊಡೆತ ಬಿದ್ದು ಅಷ್ಟರಮಟ್ಟಿಗೆ ಆ ದೇಶದ ಆದಾಯವೂ ಕುಸಿಯುವುದು ಸಹಜವೇ. ಇದನ್ನರಿತು ಕಂಗಾಲಾದ ಕೆನಡಾದ ಪ್ರಧಾನಿ ಜಸ್ಟಿನ್ ಟ್ರೂಡೋ ನವೆಂಬರ್ 29ರಂದು ಟ್ರಂಪ್​ರ ಮಾರಾ ಲಾಗೋ ನಿವಾಸಕ್ಕೆ ಓಡಿಬಂದು ದಮ್ಮಯ್ಯಗುಡ್ಡೆ ಹಾಕಿದರು.

ಟ್ರಂಪ್ ತಮ್ಮನ್ನು ಹಿಂದೆ ಜಿ-8 ಸಮ್ಮೇಳನದಲ್ಲಿ ಅವಮಾನಿಸಿದ್ದನ್ನೂ ಕೋವಿಡ್ ಸಮಯದಲ್ಲಿ 'ತಲೆಕೆಟ್ಟವನು' ಎಂದು ಬೈದದನ್ನೂ, ತಮ್ಮನ್ನು ಕ್ಯೂಬಾದ ನಾಯಕ ಫಿಡೆಲ್ ಕ್ಯಾಸ್ತ್ರೋನ ಅಕ್ರಮಸಂತಾನವೆಂದು ಹೀಗಳೆದದ್ದನ್ನೂ ಟ್ರೂಡೋ ಮರೆತೇಬಿಟ್ಟರು. ಆದರೆ ಮಾರೋ ಲಾಗೋದಲ್ಲಿ ಅವರಿಗೆ ಮತ್ತೊಂದು ಆಘಾತ ಕಾದಿತ್ತು. ತೆರಿಗೆ ತಪ್ಪಿಸಿಕೊಳ್ಳಬೇಕಾದರೆ ಕೆನಡಾವನ್ನು ಅಮೆರಿಕದ ಐವತ್ತೊಂದನೇ ರಾಜ್ಯವನ್ನಾಗಿ ಮಾಡಿಬಿಡಿ ಎಂದು ಟ್ರೂಡೋಗೆ ಟ್ರಂಪ್ ಹೇಳಿದ್ದಷ್ಟೇ ಅಲ್ಲ, ಕೆನಡಾದ ಪ್ರಧಾನಿಯನ್ನು 'ಕೆನಡಾ ರಾಜ್ಯದ ಗವರ್ನರ್' ಎಂದು ಕರೆದರು. ತಮ್ಮದು ತಮಾಷೆಯ ಮಾತಲ್ಲ, ಕೆನಡಾವನ್ನು ಅಮೆರಿಕದ ಭಾಗವಾಗಿಸುವುದು ತಮ್ಮ ಆಶಯ ಎನ್ನವುದನ್ನು ನಂತರದ ದಿನಗಳಲ್ಲಿ ಟ್ರಂಪ್ ಮತ್ತೆಮತ್ತೆ ಸ್ಪಷ್ಟಪಡಿಸುತ್ತ ಹೋದರು. ಈಗ ಟ್ರಂಪ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಾಗಿದೆ. ತಮ್ಮ ಮಾತನ್ನು ಅವರು ನಿಜವಾಗಿಸುವರೇ?

ಭೌಗೋಳಿಕವಾಗಿ ಅಮೆರಿಕಗಿಂತಲೂ ದೊಡ್ಡದಾದ, ಆದರೆ ಜನಸಂಖ್ಯೆಯಲ್ಲಿ ಅತಿ ಚಿಕ್ಕದಾದ ಕೆನಡಾ ಅಮೆರಿಕದ ಭಾಗವಾಗುವ ಬಗ್ಗೆ ಕೆನಡಿಯನ್ನರ ಒಟ್ಟಾಭಿಪ್ರಾಯ ಏನೆಂದು ಸ್ಪಪ್ಟವಾಗಿ ಹೊರಬಂದಿಲ್ಲ. ಕೆನಡಾದ ರಾಜಕೀಯ ಪಕ್ಷಗಳಿಗೆ ಇದು ಸಮ್ಮತವಿಲ್ಲ ಎನ್ನುವುದಂತೂ ಸಹಜವೇ. ಆದರೆ ಟ್ರಂಪ್​ರ ಮಾತುಗಳು ಕೆನಡಾದ ಒಂದಷ್ಟು ವಲಯಗಳಲ್ಲಿ 'ಹೊಸ ಚಿಂತನೆ'ಗೆ ಚಾಲನೆ ನೀಡಿರುವುದಂತೂ ನಿಜ. ಇದು ವ್ಯಕ್ತವಾಗುವುದು 'ಕೆನಡಾದ ಭಾಗವಾಗಿರುವುದಕ್ಕಿಂತಲೂ ಅಮೆರಿಕದ ಭಾಗವಾಗುವುದು ಆಲ್ಬರ್ಟಾ ರಾಜ್ಯದ ಜನತೆಗೆ ಹೆಚ್ಚು ಅನುಕೂಲಕರ' ಎಂದು ಆ ಕೆನಡಿಯನ್ ರಾಜ್ಯಕ್ಕೆ ಎರಡನೆಯ ಬಾರಿ ಪ್ರಿಮಿಯರ್ ಆಗಿ ಆಯ್ಕೆಯಾಗಿರುವ ಡೇನೀಯೆಲ್ ಸ್ಮಿತ್ ಅವರ ಮಾತಿನಲ್ಲಿ. ಇಂತಹದೇ ಅಭಿಪ್ರಾಯಗಳು ಇತರ ಕೆಲವು ರಾಜ್ಯಗಳ ಜನಪ್ರಿಯ ನಾಯಕರಲ್ಲೂ ಇರುವಂತಿದೆ. ಒಂದೆರಡನ್ನು ಹೊರತುಪಡಿಸಿದರೆ ಕೆನಡಾದ ಬಹುತೇಕ ಪ್ರಾಂತ್ಯಗಳು ಅಮೆರಿಕದ ಜತೆ ನೇರ ಗಡಿ ಹೊಂದಿವೆ.

ಅವುಗಳಲ್ಲಿ ಕೆಲವು ಟ್ರಂಪ್ ಒಡ್ಡಿರುವ ಸೇನಾ ಸುರಕ್ಷೆ ಹಾಗೂ ನಿರ್ಯಾತ ತೆರಿಗೆಯ ರಗಳೆಯಿಲ್ಲದ ಆರ್ಥಿಕ ಸುಭದ್ರತೆಯ ಆಮಿಷಗಳಿಗೆ ಮನಸೋತು ಕೆನಡಾದಿಂದ ಸಾಂವಿಧಾನಿಕವಾಗಿಯೇ ಪ್ರತ್ಯೇಕಗೊಂಡು ಅಮೆರಿಕ ಜತೆ ಸೇರಿದರೆ ಉಳಿದ ಕೆನಡಾ ಭೂಪಟದಲ್ಲಿ ಇಲಿ ಕಚ್ಚಿದ ಬಟ್ಟೆಯಂತಾಗುತ್ತದೆ. ರಾಜ್ಯಗಳೇ ಅಮೆರಿಕದ ಮಡಿಲಿಗೆ ಬಿದ್ದರೆ ತಮ್ಮನ್ನು ತಾವು ಆಳಿಕೊಳ್ಳುವ ರಾಜಕೀಯ ವ್ಯವಸ್ಥೆಯನ್ನು ಇನ್ನೂ ಪಡೆದುಕೊಳ್ಳದ ಯೂಕಾನ್, ನಾರ್ದನ್ ಟೆರಿಟರೀಸ್ ಮತ್ತು ಉತ್ತರದ ದ್ವೀಪಗಳು ಅಮೆರಿಕದ ಭಾಗವಾಗುವುದು ಒಂದು ಔಪಚಾರಿಕ ಕ್ರಮವಷ್ಟೇ ಆಗುತ್ತದೆ. ಅಲ್ಲಿಗೆ ಫ್ರೆಂಚ್ ಬಹುಸಂಖ್ಯಾತ ಕ್ವಿಬೆಕ್ ಸ್ವತಂತ್ರ ದೇಶವಾಗಿ ಹೊರಹೊಮ್ಮಿ ಉಳಿದ ಕೆನಡಾ ಪೂರ್ಣವಾಗಿ ಅಮೆರಿಕದ ಭಾಗವಾಗಲು ಹೆಚ್ಚು ಕಾಲ ಬೇಕಾಗುವುದಿಲ್ಲ. ಉತ್ತರ ಅಮೆರಿಕದ ಈ ಎರಡು ದೇಶಗಳ ಜನತೆಯ ನಡುವಿನ ಜನಾಂಗೀಯ, ಭಾಷಿಕ, ಧಾರ್ವಿುಕ, ಸಾಂಸ್ಕೃತಿಕ ಹಾಗೂ ಆರ್ಥಿಕ ಸಾಮ್ಯತೆಗಳು ಹೊಸ ಒಕ್ಕೂಟವನ್ನು ನಾವು ಕಲ್ಪಿಸಿಕೊಂಡಿದ್ದಕ್ಕಿಂತಲೂ ಹೆಚ್ಚು ಸುಲಭವಾಗಿಸುತ್ತವೆ. ಆ ಎರಡು ದೇಶಗಳ ನಡುವೆ ಈಗ ಇರುವ ಗಡಿ ಪ್ರಪಂಚದಲ್ಲೇ ಅತ್ಯಂತ ಕೃತಕ ಹಾಗೂ ಅರ್ಥಹೀನ ಗಡಿಗಳಲ್ಲಿ ಮೊದಲ ಸ್ಥಾನದಲ್ಲಿದೆ. ಉಭಯ ದೇಶಗಳ ಜನತೆಯ ನಡುವಿನ ಬಹುತೇಕ ಎಲ್ಲ ಬಗೆಯ ಸಾಮ್ಯತೆ ಮತ್ತು ಗಡಿಯ ಸ್ವರೂಪದಿಂದಲೇ ಅಮೆರಿಕ ಮತ್ತು ಕೆನಡಾ ಒಂದುದಿನ ರಾಜಕೀಯವಾಗಿ ಒಂದಾಗಬಹುದು ಎಂದು ನಾನು 2008ರಲ್ಲೇ ನನ್ನ 'ಖಜಛಿ ಖಜ್ಟಛಿಛಿ ಊಟ್ಞಠಿಜಿಛ್ಟಿಠ ಖಜಛಿಟ್ಟಢ' ವಿಶೇಷ ಸಂಶೋಧನಾ ಲೇಖನದಲ್ಲಿ ಹೇಳಿದ್ದೇನೆ.

ಕೆನಡಾ ಬಗೆಗಿನ ನೀತಿಯನ್ನು ಟ್ರಂಪ್ ಮೆಕ್ಸಿಕೋ ಬಗ್ಗೆ ಅನುಸರಿಸುತ್ತಿಲ್ಲ. 25% ನಿರ್ಯಾತ ತೆರಿಗೆ ತಪ್ಪಿಸಿಕೊಳ್ಳಲು ಅಮೆರಿಕ ಜತೆ ಸೇರಿಕೊಳ್ಳಿ ಎಂದು ಮೆಕ್ಸಿಕನ್ನರಿಗೆ ಅವರು ಹೇಳುತ್ತಿಲ್ಲ ಮೆಕ್ಸಿಕೋ ಕೆನಡಾ ಅಲ್ಲ. ಅಮೆರಿಕ ಮತ್ತು ಕೆನಡಾಗಳ ನಡುವೆ ಯಾವಯಾವ ಕ್ಷೇತ್ರಗಳಲ್ಲಿ ಸಾಮ್ಯತೆ ಇದೆಯೋ ಅವೆಲ್ಲ ಕ್ಷೇತ್ರಗಳಲ್ಲಿ ಅಮೆರಿಕ ಮತ್ತು ಮೆಕ್ಸಿಕೋ ನಡುವೆ ವ್ಯತ್ಯಾಸಗಳಿವೆ. ಜತೆಗೆ ಎರಡೂ ದೇಶಗಳ ಐತಿಹಾಸಿಕ ಅನುಭವಗಳೂ ಬೇರೆಬೇರೆಯೇ. ಈ ಎಲ್ಲ ಕಾರಣಗಳಿಂದಾಗಿ ಮೆಕ್ಸಿಕನ್ನರು ಅಮೆರಿಕದೊಳಗೆ ಪ್ರವೇಶಿಸುವುದೂ ಟ್ರಂಪ್​ಗೆ ಸಮ್ಮತವಿಲ್ಲ. ಅಲ್ಲಿನ ಜನ ಕಳ್ಳತನದಲ್ಲಿ ಅಮೆರಿಕ ಪ್ರವೇಶಿಸುವುದನ್ನು ತಡೆಯಲು ಸೇನೆಯನ್ನು ಬಳಸಲೂ ಅವರು ತಯಾರು.

ಇನ್ನು ಗ್ರೀನ್​ಲ್ಯಾಂಡ್ ಬಗ್ಗೆ ಒಂದು ಮಾತು. ಉತ್ತರ ಅಮೆರಿಕ ಖಂಡದ ಪೂವೋತ್ತರದಲ್ಲಿರುವ ಗ್ರೀನ್​ಲ್ಯಾಂಡ್ 21 ಲಕ್ಷ 66 ಸಾವಿರ ಚ.ಕಿ.ಮೀ ನೆಲ ಹೊಂದಿದ (ನಮ್ಮ ಕರ್ನಾಟಕದ ಹನ್ನೊಂದು ಪಟ್ಟು) ಜಗತ್ತಿನ ಅತಿ ದೊಡ್ಡ ದ್ವೀಪ. ಜನಸಂಖ್ಯೆ ಮಾತ್ರ ಕೇವಲ 57 ಸಾವಿರ! ಡೆನ್​ವಾರ್ಕ್​ನ ಸಾರ್ವಭೌಮತ್ವದಡಿ ಇರುವ ಈ ಸ್ವಾಯುತ್ತ ದ್ವೀಪ ಪೆಟ್ರೋಲಿಯಂ ಹಾಗೂ ಬಗೆಬಗೆಯ ಖನಿಜಗಳ ಆಗರ. ರಷ್ಯಾ ಮತ್ತು ಯೂರೋಪಗಳಿಗೂ ಹತ್ತಿರವಾಗಿರುವ ಇದು ಸಾಮಾರಿಕವಾಗಿಯೂ ಮಹತ್ವದ್ದು. ಇದೆಲ್ಲ ಕಾರಣಗಳಿಂದಾಗಿ ಇದನ್ನು 'ಖರೀದಿಸಿ' ಅಮೆರಿಕಕ್ಕೆ ಸೇರಿಸಿಕೊಳ್ಳಲು ಟ್ರಂಪ್ ಬಯಸುತ್ತಾರೆ. ಇದು ಸಾಧ್ಯವೇ?

ನಮಗೆ ಅಪರಿಚಿತವೆನಿಸುವ ಪ್ರದೇಶಗಳ ಖರೀದಿ ಅಮೆರಿಕನ್ನರ ಐತಿಹಾಸಿಕ ಅನುಭವದ ಒಂದು ಅವಿಭಾಜ್ಯ ಭಾಗ. ಇವರು 1803ರಲ್ಲಿ ವಿಶಾಲ ಲೂಸಿಯಾನಾವನ್ನು ಫ್ರೆಂಚರಿಂದ, ಖುದ್ದು ಟ್ರಂಪ್​ರ ಸ್ವಂತ ರಾಜ್ಯ ಫ್ಲಾರಿಡಾವನ್ನು 1819ರಲ್ಲಿ, ಅಲಾಸ್ಕಾವನ್ನು 1867ರಲ್ಲಿ ರಶಿಯನ್ನರಿಂದ ಖರೀದಿಸಿ ತಮ್ಮ ದೇಶಕ್ಕೆ ಸೇರಿಸಿಕೊಂಡಿದ್ದಾರೆ. ಡೆನ್​ವಾರ್ಕ್ ಬಗ್ಗೆ ಹೇಳುವುದಾದರೆ 'ಡೇನಿಷ್ ವೆಸ್ಟ್ ಇಂಡೀಸ್' ದ್ವೀಪಗಳನ್ನು ಡೆನ್​ವಾರ್ಕ್​ನಿಂದ ಅಮೆರಿಕ 1917ರಲ್ಲಿ ಖರೀದಿಸಿ ವರ್ಜಿನ್ ಐಲ್ಯಾಂಡ್ಸ್ ಎಂಬ ಹೆಸರಿನಲ್ಲಿ ತನ್ನದಾಗಿಸಿಕೊಂಡಿದೆ. ಈಗ ಅದೇ ಡೆನ್​ವಾರ್ಕ್​ನಿಂದ ಗ್ರೀನ್​ಲ್ಯಾಂಡ್ ಅನ್ನೂ ಖರೀದಿಸುವ ಮಾತನ್ನು ಟ್ರಂಪ್ ಆಡುತ್ತಿದ್ದಾರೆ. ಆದರೆ ಇಲ್ಲಿ ಪ್ರಶ್ನೆಯೆಂದರೆ ಗ್ರೀನ್​ಲ್ಯಾಂಡ್ ಸ್ವಾಯತ್ತ ಪ್ರದೇಶವಾಗಿರುವುದರಿಂದ ಅದನ್ನು ಮಾರುವ 'ಅಧಿಕಾರ' ಡೆನ್​ವಾರ್ಕ್​ಗೆ ಇಲ್ಲ. ಒಂದುವೇಳೆ 'ಯಾವುದೇ ವಿಧಾನ'ದಿಂದ ಗ್ರೀನ್​ಲ್ಯಾಂಡ್​ನ ಜನರ ಮನವೊಲಿಸಿ, ಅಮೆರಿಕಕ್ಕೆ ಸೇರುವ ನಿರ್ಣಯವನ್ನು ಅವರು 'ಯಾವುದೇ ಜನತಾಂತ್ರಿಕ' ವಿಧಾನದಿಂದ ತೆಗೆದುಕೊಳ್ಳುವಂತೆ ಮಾಡುವುದರಲ್ಲಿ ಟ್ರಂಪ್ ಯಶಸ್ವಿಯಾದರೆ ಆಗ ಅದಕ್ಕೆ ತನ್ನ ಅಂಗೀಕಾರದ ಮುದ್ರೆಯೊತ್ತುವುದರ ಹೊರತಾಗಿ ಡೆನ್​ವಾರ್ಕ್​ನ ಶಾಸಕಾಂಗ ಮತ್ತು ಅರಸನಿಗೆ ಬೇರೆ ದಾರಿ ಇರುವುದಿಲ್ಲ. ಇದನ್ನು ತಮ್ಮ ಕಾರ್ಯಕಾಲದಲ್ಲೇ ಸಾಧಿಸಲು ಟ್ರಂಪ್ ಸಫಲರಾಗುತ್ತಾರೆಯೇ ಹೇಳಲಾಗುವುದಿಲ್ಲ.

ಆದರೆ ಒಂದಂತೂ ನಿಜ. ಇಲ್ಲಿ ಸೇನೆಯ ಬಳಕೆ ಸಾಧ್ಯವಾಗದು. ಹಾಗೇನಾದರೂ ಆದರೆ ತನ್ನದೇ ನೇತೃತ್ವದ ನ್ಯಾಟೋದ ಸದಸ್ಯ ದೇಶವಾದ ಡೆನ್​ವಾರ್ಕ್​ನೊಂದಿಗೆ ವಿರಸ ಕಟ್ಟಿಕೊಳ್ಳಬೇಕಾಗುತ್ತದೆ. ಅದು ನ್ಯಾಟೋ ಸೇನಾಕೂಟವನ್ನು ಬಲಹೀನಗೊಳಿಸಿ ರಷ್ಯಾ ಅಥವಾ ಚೀನಾಗೆ ಸಾಮರಿಕ ಅನುಕೂಲವನ್ನು ಒದಗಿಸಬಹುದು. ಟ್ರಂಪ್ ಇಂತಹ ಸನ್ನಿವೇಶವನ್ನು ಸೃಷ್ಟಿಸಿಕೊಳ್ಳುವುದಿಲ್ಲ. ವ್ಯವಹಾರಕುಶಲಿ ಡೊನಾಲ್ಡ್ ಟ್ರಂಪ್ 'ಗ್ರೀನ್​ಲ್ಯಾಂಡ್ ಖರೀದಿ ವ್ಯವಹಾರ'ವನ್ನು ಹೇಗೆ ಸಾಧಿಸುತ್ತಾರೆಂಬ ಕುತೂಹಲ ನನಗಂತೂ ಇದೆ. ಜಗತ್ತಿಗೂ ಇದೆ ಎನ್ನದಿರಲಾಗದು. ಇಷ್ಟೆಲ್ಲ ಆದರೆ ಆಗ ಎರಡು ಕೋಟಿಗೂ ಹೆಚ್ಚು ಚದರ ಕಿಲೋಮೀಟರ್ ನೆಲದೊಂದಿಗೆ ಅಮೆರಿಕ ಭೌಗೋಳಿಕವಾಗಿ ರಷ್ಯಾವನ್ನು ಹಿಂದಕ್ಕೆ ತಳ್ಳಿ ಜಗತ್ತಿನ ಅತಿ ದೊಡ್ಡ ದೇಶವಾಗುತ್ತದೆ. ಈ ಬಗೆಯ ಭೂಪಟ ಬದಲಾವಣೆ ಟ್ರಂಪ್​ರ ಕಾಲಾವಧಿಯಲ್ಲೇ ಪೂರ್ಣಗೊಳ್ಳದಿರಬಹುದು. ಆದರೆ ಈ ಚಿಂತನೆಯ ಬೀಜಾಂಕುರ ವನ್ನು ಟ್ರಂಪ್ ನೆರವೇರಿಸಿರುವುದಂತೂ ನಿಜ. ಒಂದಲ್ಲ ಒಂದು ದಿನ ಫಲ ಖಚಿತ.

ಅಮೆರಿಕ ಖಂಡದಾಚೆ ಜಾಗತಿಕ ಶಾಂತಿಗಾಗಿ ಟ್ರಂಪ್ ಹೂಡಿರುವ ಯೋಜನೆಗಳಲ್ಲೂ ಭೂಪಟ ಬದಲವಾಣೆ ಪ್ರಮುಖವಾಗಿರುತ್ತದೆ. ಜತೆಗೆ ಅವರ ನೀತಿಗಳು ಭೂಪಟ ಬದಲಾವಣೆಗೆ ಪರೋಕ್ಷವಾಗಿಯೂ ಕಾರಣವಾಗುವ ಸಾಧ್ಯತೆ ಇದೆ. ಆ ಪ್ರಕಾರ ಯೂಕ್ರೇನ್, ಪಶ್ಚಿಮ ಏಷ್ಯಾ, ದಕ್ಷಿಣ ಏಷ್ಯಾ ಮತ್ತು ಬಹುಶಃ ಪೂರ್ವ ಏಷ್ಯಾದಲ್ಲಿ ಭೂಪಟಗಳು ನವೀಕರಣಗೊಳ್ಳುತ್ತವೆ ಮತ್ತು ಅದು ಟ್ರಂಪ್ ಆಡಳಿತ ಕಾಲದಲ್ಲೇ ಆಗುತ್ತದೆ. ಇದನ್ನು ಲೇಖನದ ಎರಡನೆಯ ಭಾಗದಲ್ಲಿ ನೋಡೋಣ.

ಪ್ರಿಯಕರನ ಹತ್ಯೆಗೆ 'ಡೀಪ್​ ರಿಸರ್ಚ್​'! ಗಲ್ಲುಶಿಕ್ಷೆಗೆ ಗುರಿಯಾದ ಪಾಪಿ ಪ್ರೇಯಸಿ ಪಿತೂರಿ ತನಿಖೆಯಲ್ಲಿ ಬಯಲು | Greeshma

Post a Comment

Previous Post Next Post