ಮಂಗಳವಾರ ವಿಚಾರಣೆ ಸಂದರ್ಭದಲ್ಲಿ ಬಾಲಕನ ನಿಜವಾದ ತಂದೆ ಎಂದು ಮಹಿಳೆ ಪ್ರತಿಪಾದಿಸಿದ್ದ ವ್ಯಕ್ತಿಯ ಡಿಎನ್‌ಎ ಪರೀಕ್ಷೆಯನ್ನು ಕೋರಿ ಆಕೆ ಮತ್ತು ಆಕೆಯ ಪುತ್ರ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ ಮತ್ತು ಉಜ್ಜಲ ಭುಯಾನ್ ಅವರ ಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು.
1991ರಲ್ಲಿ ವಿವಾಹವಾಗಿದ್ದ ಮಹಿಳೆ ಓರ್ವ ಪುತ್ರಿಯನ್ನು ಹೊಂದಿದ್ದಳು. 2001ರಲ್ಲಿ ಪುತ್ರ ಜನಿಸಿದ್ದು, ಕೊಚ್ಚಿನ್ ಮಹಾನಗರ ಪಾಲಿಕೆಯ ಜನನ ರಿಜಿಸ್ಟರ್‌ನಲ್ಲಿ ಪತಿಯ ಹೆಸರನ್ನು ಪುತ್ರನ ತಂದೆ ಎಂದು ನಮೂದಿಸಲಾಗಿತ್ತು. ತಮ್ಮ ನಡುವಿನ ಭಿನ್ನಾಭಿಪ್ರಾಯಗಳಿಂದಾಗಿ ದಂಪತಿ 2003ರಲ್ಲಿ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದ್ದರು. ಕೆಲ ಸಮಯದ ಬಳಿಕ ಅವರು ವಿಚ್ಛೇದನವನ್ನು ಕೋರಿ ಕುಟುಂಬ ನ್ಯಾಯಾಲಯಕ್ಕೆ ಜಂಟಿ ಅರ್ಜಿಯನ್ನು ಸಲ್ಲಿಸಿದ್ದು,2006ರಲ್ಲಿ ನ್ಯಾಯಾಲಯವು ವಿಚ್ಛೇದನವನ್ನು ಮಂಜೂರು ಮಾಡಿತ್ತು.
ನಂತರ ಮಹಾನಗರ ಪಾಲಿಕೆ ಅಧಿಕಾರಿಗಳನ್ನು ಸಂಪರ್ಕಿಸಿದ್ದ ಮಹಿಳೆ ತಾನು ವ್ಯಕ್ತಿಯೋರ್ವನೊಂದಿಗೆ ವಿವಾಹೇತರ ಸಂಬಂಧವನ್ನು ಹೊಂದಿದ್ದೆ ಮತ್ತು ಆ ವ್ಯಕ್ತಿ ತನ್ನ ಪುತ್ರನ ಜೈವಿಕ ತಂದೆಯಾಗಿದ್ದಾನೆ, ಹೀಗಾಗಿ ದಾಖಲೆಯಲ್ಲಿ ತನ್ನ ಪುತ್ರನ ತಂದೆಯಾಗಿ ಆ ವ್ಯಕ್ತಿಯ ಹೆಸರನ್ನು ನಮೂದಿಸುವಂತೆ ಕೋರಿಕೊಂಡಿದ್ದಳು. ನ್ಯಾಯಾಲಯವು ನಿರ್ದೇಶನ ನೀಡಿದರೆ ಮಾತ್ರ ತಾನು ಹಾಗೆ ಮಾಡಲು ಸಾಧ್ಯ ಎಂದು ಮಹಾನಗರ ಪಾಲಿಕೆ ಮಹಿಳೆಗೆ ತಿಳಿಸಿತ್ತು.
ಹಲವಾರು ಸುತ್ತುಗಳ ದಾವೆಗಳ ಬಳಿಕ ವಿಷಯವು ಅಂತಿಮವಾಗಿ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿತ್ತು.
ಕಾನೂನುಬದ್ಧತೆ ಮತ್ತು ಪಿತೃತ್ವ ಪ್ರತ್ಯೇಕ ನಿರ್ಣಯದ ಅಗತ್ಯವಿರುವ ವಿಭಿನ್ನ ಪರಿಕಲ್ಪನೆಗಳಾಗಿವೆ ಎಂಬ ಮಹಿಳೆ ಮತ್ತು ಆಕೆಯ ಪುತ್ರನ ವಾದವನ್ನು ಮಂಗಳವಾರ ತಳ್ಳಿಹಾಕಿದ ಸರ್ವೋಚ್ಚ ನ್ಯಾಯಾಲಯವು,ದಂಪತಿಯ ನಡುವೆ ಪರಸ್ಪರ ದೈಹಿಕ ಸಂಪರ್ಕವಿರಲಿಲ್ಲ ಎಂದು ಯಶಸ್ವಿಯಾಗಿ ಸಾಬೀತುಗೊಳಿಸುವವರೆಗೆ ಭಾರತೀಯ ಸಾಕ್ಷ್ಯ ಕಾಯ್ದೆ,1872ರ ಕಲಂ 112ರಡಿ ಕಾನೂನುಬದ್ಧತೆಯು ಪಿತೃತ್ವವನ್ನು ನಿರ್ಧರಿಸುತ್ತದೆ ಎಂದು ಎತ್ತಿ ಹಿಡಿಯಿತು.
ತೀರ್ಪನ್ನು ಬರೆದ ನ್ಯಾ.ಸೂರ್ಯಕಾಂತ ಅವರು,ಭಾರತೀಯ ಸಾಕ್ಷ್ಯ ಕಾಯ್ದೆಯ ಕಲಂ 112ರ ಭಾಷೆಯು,ವೈವಾಹಿಕ ಜೀವನದ ಅವಧಿಯಲ್ಲಿ ಹೆಂಡತಿಯು ಹೆರುವ ಮಗುವಿಗೆ ಗಂಡನೇ ತಂದೆ ಎಂಬ ಬಲವಾದ ಭಾವನೆ ಅಸ್ತಿತ್ವದಲ್ಲಿದೆ ಎನ್ನುವುದನ್ನು ಅತ್ಯಂತ ಸ್ಪಷ್ಟವಾಗಿಸಿದೆ. ಈ ಕಲಂ ಕಾನೂನುಬದ್ಧತೆಯ ನಿರ್ಣಾಯಕ ಪುರಾವೆಯು ಪಿತೃತ್ವಕ್ಕೆ ಸಮನಾಗಿರುತ್ತದೆ ಎಂದು ಹೇಳಿದೆ. ಮಗುವಿನ ಪೋಷಕರ ಬಗ್ಗೆ ಯಾವುದೇ ಅನಗತ್ಯ ವಿಚಾರಣೆಯನ್ನು ತಡೆಯುವುದು ಈ ತತ್ವದ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.
Post a Comment