ರತಾಂಬೆಯ ನೆಲವನ್ನು ಕಾಯುವ ವೀರಯೋಧರು ನಮ್ಮ ಹೆಮ್ಮೆ. ರಾತ್ರಿ, ಹಗಲು, ಚಳಿ, ಮಳೆಯನ್ನೂ ಲೆಕ್ಕಿಸದೇ, ಸಂಸಾರ ಕುಟುಂಬ ಎಲ್ಲವನ್ನೂ ಬಿಟ್ಟು ದೇಶದ ಗಡಿಭಾಗದಲ್ಲಿ ಹಗಲಿರುಳು ಸೇವೆ ಮಾಡುತ್ತಾ ನಮ್ಮೆಲ್ಲರನ್ನು ಕಾಯುವ ವೀರಯೋಧರಿಗೆ ಗೌರವ ಸಲ್ಲಿಸುವ ಜೊತೆಗೆ ಕೃತಜ್ಞತೆಯನ್ನೂ ತೋರಬೇಕಾಗಿರುವುದು ನಮ್ಮ ಕರ್ತವ್ಯ.

ಭಾರತ ಮಾತೆಯ ವೀರಮಕ್ಕಳನ್ನು ಸ್ಮರಿಸಿ, ಗೌರವಿಸುವ ಉದ್ದೇಶದಿಂದ ಪ್ರತಿವರ್ಷ ಜನವರಿ 15ಕ್ಕೆ ಭಾರತೀಯ ಸೇನಾ ದಿನವನ್ನು ಆಚರಿಸಲಾಗುತ್ತದೆ. ಈ ದಿನವೂ ಭಾರತೀಯ ಸೇನೆಯ ಸ್ಥಾಪನೆಯನ್ನು ಗುರುತಿಸುತ್ತದೆ. ಭಾರತದ ಮಿಲಿಟರಿ ಸ್ವಾತಂತ್ರ್ಯವನ್ನು ಹಾಗೂ ಸ್ವಾತಂತ್ರ್ಯದ ನಂತರ ಭಾರತೀಯ ನಾಯಕತ್ವಕ್ಕೆ ಅಧಿಕಾರ ವರ್ಗಾವಣೆಯನ್ನು ಸಂಕೇತಿಸುತ್ತದೆ.

ಭಾರತೀಯ ಸೇನಾ ದಿನವು ಬಲವಾದ ದೇಶಭಕ್ತಿಯ ಪ್ರಜ್ಞೆಯನ್ನು ಬೆಳೆಸುವ ಮೂಲಕ ರಾಷ್ಟ್ರಕ್ಕಾಗಿ ತಮ್ಮ ಪ್ರಾಣವನ್ನು ಮುಡಿಪಿಟ್ಟ ನಮ್ಮ ಸೈನಿಕರ ಶೌರ್ಯ ಹಾಗೂ ತ್ಯಾಗಗಳನ್ನು ಗೌರವಿಸುತ್ತದೆ. ಭಾರತೀಯ ಸೇನಾ ದಿನವು ಎಲ್ಲಾ ಭಾರತೀಯರಲ್ಲಿ ದೇಶಭಕ್ತಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಈ ಸಂದರ್ಭದಲ್ಲಿ ಜನವರಿ 15ಕ್ಕೆ ಭಾರತೀಯ ಸೇನಾ ದಿನ ಆಚರಿಸುವುದೇಕೆ, ಈ ದಿನದ ಉದ್ದೇಶ, ಮಹತ್ವವೇನು ಎಂಬುದನ್ನು ತಿಳಿಯೋಣ.

: ನಿಮ್ಮ ಸೇನೆ ಬಗ್ಗೆ ತಿಳ್ಕೊಳ್ಳಿ; ಬೆಂಗಳೂರು ಮಾಣಿಕ್‌ ಷಾ ಪರೇಡ್ ಮೈದಾನದಲ್ಲಿ ಭಾರತೀಯ ಸೇನಾ ಪ್ರದರ್ಶನ, ನಾಳೆ ಏನೇನಿರುತ್ತೆ ಕಾರ್ಯಕ್ರಮ

ಜನವರಿ 15ಕ್ಕೆ ಸೇನಾ ದಿನ ಆಚರಿಸುವುದೇಕೆ?

ಭಾರತೀಯರ ಸೇನಾ ದಿನವನ್ನು 1895 ಏಪ್ರಿಲ್ 1ರಲ್ಲೇ ಆರಂಭಿಸಲಾಯಿತು. ಆಗ ನಮ್ಮ ದೇಶದಲ್ಲಿ ಬ್ರಿಟಿಷರ ಆಳ್ವಿಕೆ ಇತ್ತು. ಆ ಸಮಯದಲ್ಲಿ ನಮ್ಮ ಸೇನೆಯನ್ನು ಬ್ರಿಟಿಷ್ ಭಾರತೀಯ ಸೇನೆ ಎಂದು ಕರೆಯಲಾಗುತ್ತಿತ್ತು. ಆಗ ಸೇನಾ ಕಮಾಂಡರ್‌ಗಳು ಕೂಡ ಬ್ರಿಟಿಷರೇ ಆಗಿದ್ದರು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 2 ವರ್ಷಗಳ ನಂತರ ಅಂದರೆ 1948, ಜನವರಿ 15ಕ್ಕೆ ಜನರಲ್ ಕೆ.ಎಂ. ಕಾರ್ಯಪ್ಪ ಅವರು ಕಮಾಂಡರ್-ಇನ್-ಚೀಫ್ ಹುದ್ದೆಗೆ ಆಯ್ಕೆಯಾಗುತ್ತಾರೆ. ಈ ಸಂದರ್ಭ ಮೊದಲ ಬಾರಿಗೆ ಭಾರತೀಯರ ನಾಯಕತ್ವದಲ್ಲಿ ಭಾರತೀಯ ಸೈನ್ಯವನ್ನು ಕಮಾಂಡ್ ಮಾಡುವ ಅವಕಾಶ ದಕ್ಕಿತ್ತು. ಈ ಪರಿವರ್ತನೆಯು ಬ್ರಿಟಿಷ್ ಆಳ್ವಿಕೆಯಿಂದ ದೂರ ಸರಿದ ಭಾರತದ ಮಿಲಿಟರಿ ಇತಿಹಾಸದ ಕಾಲಮಾನದಲ್ಲಿ ಒಂದು ನಿರ್ಣಾಯಕ ಕ್ಷಣವಾಗಿತ್ತು. ಈ ದಿನವನ್ನು ಒಂದು ಮಹತ್ವದ ದಿನ ಪರಿಗಣಿಸಿ, ಈ ದಿನದ ನೆನಪಿನಲ್ಲಿ ಪ್ರತಿ ವರ್ಷ ಜನವರಿ 15ಕ್ಕೆ ಭಾರತೀಯ ಸೈನ್ಯ ದಿನವನ್ನು ಆಚರಿಸಲು ಆರಂಭಿಸಲಾಯಿತು.

ಭಾರತೀಯ ಸೇನೆಯು ಅತ್ಯಂತ ಶಕ್ತಿಶಾಲಿ ಸೇನಾ ಪಡೆಗಳಲ್ಲಿ ಒಂದೆಂದು ಹೆಸರುವಾಸಿಯಾಗಿದೆ. ಇದು ಗಡಿಗಳನ್ನು ರಕ್ಷಿಸಲು ಮತ್ತು ಅಂತರರಾಷ್ಟ್ರೀಯ ಶಾಂತಿಪಾಲನಾ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಶ್ರಮಿಸುತ್ತದೆ. ಸೇನೆಯು ನಿರಂತರವಾಗಿ ರಾಷ್ಟ್ರಕ್ಕಾಗಿ ಶ್ರಮಿಸುತ್ತಿದೆ. ತನ್ನ ಸಮರ್ಪಣೆ ಮತ್ತು ಉತ್ತಮ ಸೇವೆಯನ್ನು ಮತ್ತಷ್ಟು ಸಾಬೀತುಪಡಿಸಿದೆ.

: ಭಾರತೀಯ ಸೇನೆಯಲ್ಲಿರುವ ಶ್ವಾನಗಳ ಬಗೆಗಿನ 5 ಅದ್ಭುತ ಸಂಗತಿಗಳು

ಭಾರತೀಯ ಸೇನಾ ದಿನದ ಮಹತ್ವ

ನಮ್ಮ ರಾಷ್ಟ್ರವನ್ನು ರಕ್ಷಿಸಲು ಸಾವಿರಾರು ಯೋಧರು ಪ್ರಾಣತ್ಯಾಗ ಮಾಡಿದ್ದಾರೆ. ಅವರ ತ್ಯಾಗ, ಬಲಿದಾನಕ್ಕೆ ಗೌರವ ಸಲ್ಲಿಸುವ ಉದ್ದೇಶದಿಂದಲೂ ಈ ದಿನವನ್ನು ಆಚರಿಸಲಾಗುತ್ತದೆ. ಭಾರತೀಯ ಸೇನಾ ದಿನವು ನಮ್ಮ ಸಶಸ್ತ್ರ ಪಡೆಗಳು ಪ್ರತಿದಿನ ಚಿತ್ರಿಸುವ ಶೌರ್ಯ ಮತ್ತು ನಿರಂತರ ದೃಢಸಂಕಲ್ಪದ ಮೇಲೆ ಬೆಳಕು ಚೆಲ್ಲುತ್ತದೆ. ದೇಶವನ್ನು ರಕ್ಷಿಸುವಲ್ಲಿ ಸದಾ ಮುಂದಿರುವ ಯೋಧರ ಬೆಲೆ ಕಟ್ಟಲಾಗದ ಧೈರ್ಯ, ಶೌರ್ಯಕ್ಕೆ ಗೌರವ ಸಲ್ಲಿಸುವ ಮೂಲಕ ಈ ದಿನವನ್ನು ಆಚರಿಸಬೇಕಿದೆ.

ಭಾರತೀಯ ಸೇನಾ ದಿನ 2025ರ ಥೀಮ್

ಈ ಬಾರಿ ನಾವು 77ನೇ ಭಾರತೀಯ ಸೇನಾ ದಿನವನ್ನು ಆಚರಿಸುತ್ತಿದ್ದೇವೆ. 'ಸಮರ್ಥ ಭಾರತ, ಸಕ್ಷಮ ಸೇನಾ' ಎನ್ನುವುದು ಈ ಸಲದ ಸೇನಾ ದಿನದ ಥೀಮ್ ಆಗಿದೆ. ದೆಹಲಿಯ ಕಾರ್ಯಪ್ಪ ಪೆರೇಡ್ ಮೈದಾನದಲ್ಲಿ ಭಾರತೀಯ ಸೇನೆಯು ತನ್ನ ಆಧುನಿಕ ಯಂತ್ರೋಪಕರಣಗಳು ಮತ್ತು ವಿವಿಧ ಯುದ್ಧ ತಂತ್ರಗಳನ್ನು ಪ್ರದರ್ಶಿಸಲಿದೆ. ಪ್ರದರ್ಶನಗಳ ಜೊತೆಗೆ, ಮಿಲಿಟರಿ ವ್ಯಾಯಾಮಗಳು, ಮೆರವಣಿಗೆಗಳು, ಸಾಂಸ್ಕೃತಿಕ ನೃತ್ಯಗಳು ಮತ್ತು ಇತರ ಕಾರ್ಯಕ್ರಮಗಳು ಇರುತ್ತವೆ.

Reshma

Post a Comment

Previous Post Next Post