ಸಿರಿಯಾ ಇಸ್ಲಾಂ ಬಹುಸಂಖ್ಯಾತ ದೇಶ. ಈಗಲ್ಲಿ ಕೊಚ್ಚುತ್ತಿರುವವರೂ ಮುಸ್ಲಿಮರೇ, ಕೊಲೆಯಾಗುತ್ತಿರುವವರೂ ಮುಸಲ್ಮಾನರೇ. ರೇಪ್ ಮಾಡುತ್ತಿರುವವನೂ ಇಸ್ಲಾಂ ಅನುಯಾಯಿ, ರೇಪಿಗೊಳಗಾಗುತ್ತಿರುವವಳೂ ಅಲ್ಲಾಹುವಿನ ಶ್ರದ್ಧಾರ್ಥಿ.
ಪಶ್ಚಿಮ ಏಷ್ಯದ ಮುಸ್ಲಿಂ ದೇಶಗಳ ಪೈಕಿ ಕೆಲವೊಂದನ್ನು ಬಿಟ್ಟರೆ ಇನ್ನುಳಿದವೆಲ್ಲ ಹೀಗೆಯೇ, ಅದರಲ್ಲಿ ಅಚ್ಚರಿಯ ಸುದ್ದಿ ಎಂಬಂತೆ ಕಾಣುವುದಕ್ಕೇನಿದೆ ಎಂದು ನೀವು ಹೇಳುತ್ತೀರೇನೋ. ಇದೇಕೆ ಮಾಮೂಲಿನ ವಿದ್ಯಮಾನವಾಗುತ್ತಿದೆ ಎಂಬುದನ್ನು ಚರ್ಚಿಸುವುದಕ್ಕೋಸ್ಕರವೇ ಈ ಜಾಗತಿಕ ವಿದ್ಯಮಾನದೊಂದಿಗೆ ಅಂಕಣ ಪ್ರಾರಂಭಿಸಬೇಕಾಯಿತು.
ಇತರ ಮುಸ್ಲಿಂ ದೇಶಗಳಲ್ಲೂ ಸಿರಿಯಾ ಸಮಸ್ಯೆಯ ಬಿಂಬ
ಕೆಲವು ತಿಂಗಳುಗಳ ಹಿಂದೆ ಬಶರ್ ಅಲ್ ಅಸಾದ್ ಎಂಬ ಸರ್ವಾಧಿಕಾರಿ ಸಿರಿಯಾವನ್ನು ತೊರೆಯಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಇಸ್ವಿ 2000ದಿಂದಲೂ ಸಿರಿಯಾವನ್ನು ಆಳಿಕೊಂಡು ಬಂದಿದ್ದ ಅಸಾದ್ ಅಲ್ಲಿನ ಜನರನ್ನು ಅದುಮಿಡುವುದಕ್ಕೆ ಬಳಸಿದ್ದ ಕ್ರೌರ್ಯವೇನೂ ಕಡಿಮೆಯದ್ದಲ್ಲ. ಸುನ್ನಿ ಬಹುಸಂಖ್ಯಾತ ಸಿರಿಯಾದಲ್ಲಿ ಶಿಯಾ ಸಮುದಾಯದ ಅಲ್ವೈಟ್ ಎಂಬ ಗುಂಪಿಗೆ ಸೇರಿದವ ಅಸಾದ್. ಈ ಸಮುದಾಯವು ಸಿರಿಯಾ ಜನಸಂಖ್ಯೆಯ ಶೇ. 15ರ ಆಸುಪಾಸಿನಲ್ಲಿದ್ದರೂ, ಪಶ್ಚಿಮ ಏಷ್ಯದ ಶಿಯಾ ಶಕ್ತಿಕೇಂದ್ರವಾಗಿರುವ ಇರಾನಿನ ಕೃಪಾಪೋಷಣೆಯಿಂದ ಅಧಿಕಾರ ಚಲಾಯಿಸಿಕೊಂಡಿದ್ದವನು ಅಸಾದ್. ಸಹಜವಾಗಿಯೇ ಮಿಲಿಟರಿ ಮತ್ತು ರಾಜಕಾರಣದ ಆಯಕಟ್ಟಿನ ಜಾಗಗಳಲ್ಲಿ ಅಲ್ವೈಟ್ ಜಾತಿಯವರು ಹೆಚ್ಚು ಬಂದು ಕುಳಿತಿದ್ದರು. ಯಾವಾಗ ಅಸಾದ್ ಜಾಗದಲ್ಲಿ ಬೇರೆಯವರಿಗೆ ಅಧಿಕಾರ ಬಂತೋ ಅದಾಗಿ ಕೆಲವು ತಿಂಗಳಲ್ಲಿ ಈ ಶಿಯಾ ಅಲ್ವೈಟ್ ಸಮುದಾಯದ ಮೇಲೆ ಹಿಂಸಾಚಾರ ಶುರುವಾಗಿದೆ. ಅದರ ಮೊದಲ ಕಿಡಿ ಮಿಲಿಟರಿಯಲ್ಲೇ ಹತ್ತಿದೆ. ಈ ಹಿಂದೆ ಅಸಾದ್ ಅಧಿಕಾರಕ್ಕೆ ನಿಷ್ಠರಾಗಿದ್ದವರನ್ನು ಗುರಿ ಮಾಡಿ ಸಿರಿಯಾ ಪಡೆಯ ಯೋಧನೇ ಗುಂಡಿನ ದಾಳಿ ಶುರುಮಾಡುವುದರೊಂದಿಗೆ ಶುರುವಾದ ರಕ್ತಪಾತವೀಗ ಕೇವಲ ಮಿಲಿಟರಿಗೆ ಸೀಮಿತವಾಗಿರದೇ ಬೀದಿಗೆ ಬಂದು ನಿಂತಿದೆ. ಅಲ್ವೈಟ್ ಸಮುದಾಯದವರ ಮನೆಗಳಿಗೆ ಬೆಂಕಿ ಹಾಕಿ ಅವರ ಆಸ್ತಿಗಳನ್ನು ದೋಚುವ, ಮಹಿಳೆಯರನ್ನು ಮಾನಭಂಗಕ್ಕೊಳಪಡಿಸುವ ಕ್ರೌರ್ಯ ಕಾಳ್ಗಿಚ್ಚಿನಂತೆ ಹಬ್ಬುತ್ತಿದೆ.
ಪಶ್ಚಿಮ ಏಷ್ಯದ ವಿಷಯದಲ್ಲಿ ಈ ಥರದವು ಹೊಸತಲ್ಲ. 2003ಕ್ಕೂ ಮೊದಲು ಇರಾಕನ್ನು ಸದ್ದಾಂ ಹುಸೇನ್ ಆಳುತ್ತಿದ್ದನಲ್ಲ. ಅಲ್ಲಿ ಸಿರಿಯಾದ ಉಲ್ಟಾ ಕತೆ ಇತ್ತು. ಅಂದರೆ ಶಿಯಾ ಬಹುಸಂಖ್ಯಾತರನ್ನು ತನ್ನ ಸರ್ವಾಧಿಕಾರದ ಬಿಗಿ ಹಿಡಿತದಲ್ಲಿರಿಸಿಕೊಂಡಿದ್ದ ಸುನ್ನಿ ಸದ್ದಾಂ ಹುಸೇನ್. ಜಾಗತಿಕ ರಾಜಕಾರಣದ ಸಲುವಾಗಿ ಅಮೆರಿಕ ಆತನನ್ನು ಮುಗಿಸಿತು. ಅಲ್ಲಿಗೆ ಎಲ್ಲವೂ ಮಂಗಳವಾಗಬೇಕಿತ್ತಲ್ಲವೇ? ಆದರೆ, ಸದ್ದಾಂ ಇದ್ದಾಗಲೇ ಪರವಾಗಿರಲಿಲ್ಲ ಎಂಬಷ್ಟರಮಟ್ಟಿಗೆ ಅಲ್ಲಿ ಶಿಯಾ ವರ್ಸಸ್ ಸುನ್ನಿ ಹಿಂಸಾಚಾರ ಮುಗಿಲುಮುಟ್ಟಿತು. ಕೊನೆಗೊಮ್ಮೆ ಐಎಸ್‌ಐಎಸ್ ಎಂಬ ಅತಿ ಪೈಶಾಚಿಕ ಉಗ್ರ ಸಂಘಟನೆ ಅದೇ ನೆಲದಲ್ಲಿ ಎದ್ದುನಿಲ್ಲುವಷ್ಟರಮಟ್ಟಿಗೆ ಇತಿಹಾಸ ಪಲ್ಟಿ ಹೊಡೆದುಕೊಂಡಿತು.
33 ವರ್ಷಗಳ ಅಧಿಕಾರದ ನಂತರ ಯೆಮೆನ್ ನಲ್ಲಿ ಅಬ್ದುಲ್ಲಾ ಸಲೇಹ್ ಎಂಬಾತನ ಅಧಿಕಾರ 2011ರಲ್ಲಿ ಕೊನೆಗೊಂಡಾಗ ಅಲ್ಲೇನೂ ಪ್ರಜಾಪ್ರಭುತ್ವ ಕುಣಿಯಲಿಲ್ಲ. ಹೂತಿ ಬಂಡುಕೋರರು ಹಾಗೂ ಅಸಂಖ್ಯ ಗುಂಪು ಹಿಂಸಾಚಾರಗಳ ನಡುವೆ ಯೆಮೆನ್ ಬೇಯುತ್ತಲೇ ಇದೆ. ಅತ್ತ, ಆಫ್ರಿಕಾದ ಅರಬ್ ದೇಶವಾಗಿರುವ ಲಿಬಿಯಾದಲ್ಲಿ ಸಹ 2011ರಲ್ಲಿ ಗದ್ದಾಫಿಯನ್ನು ಪರಲೋಕಕ್ಕೆ ಕಳುಹಿಸಿ ಅಮೆರಿಕ ಪ್ರಣೀತ ನ್ಯಾಟೊ ಪಡೆ ತಾನ್ಯಾವುದೋ ಲೋಕೋದ್ಧಾರ ಸಾಧಿಸಿದ ರೀತಿ ಪೋಸು ಕೊಟ್ಟಿದ್ದೇ ಬಂತು. ಆ ದೇಶದಲ್ಲಿ ಒಬ್ಬನು ಒಂದು ಮುಖದ ಅನಾಚಾರ ನಡೆಸುತ್ತಿದ್ದುದರ ಬದಲಾಗಿ ಈಗಲ್ಲಿ ನೂರೆಂಟು ಗುಂಪುಗಳು ನೂರೆಂಟು ಬಗೆಗಳಲ್ಲಿ ಹಿಂಸಾಚಾರ-ಅತ್ಯಾಚಾರಗಳನ್ನು ನಡೆಸಿಕೊಂಡಿರುವಂತಾಗಿದೆ.
ಕುರ್ದ್ ಬುಡಕಟ್ಟಿನ ಯಾಜಿದಿ ಸಮುದಾಯವೂ ಇಸ್ಲಾಂ ಅನುಯಾಯಿಯೇ. ಅರಬ್ ನೆಲದಲ್ಲಿ ಇತ್ತೀಚಿನ ವರ್ಷಗಳಲ್ಲಿ ಇವರು ಆಟದ ವಸ್ತುಗಳು. ಈ ಸಮುದಾಯದ ಹೆಂಗಸರು ಯಾವಾಗ ಯಾವ ಇಸ್ಲಾಮಿಕ್ ಗುಂಪಿನ ಸೆಕ್ಸ್ ಗುಲಾಮರಾಗುತ್ತಾರೋ ಹೇಳಲಾಗದ ಸ್ಥಿತಿ. ಐಎಸ್‌ಐಎಸ್ ಉಚ್ಛ್ರಾಯದಲ್ಲಿದ್ದಾಗ ಯಾಜಿದಿ ಹೆಂಗಸರನ್ನೆಲ್ಲ ಉಗ್ರರ ವೇಶ್ಯೆಯರನ್ನಾಗಿಸಿತ್ತು. ಟರ್ಕಿಯ ಎರ್ದೊಗಾನ್ ಈಗಲೂ ಇವರ ವಿರುದ್ಧ ಬಂಡಾಯದ ಸಶಸ್ತ್ರ ಗುಂಪುಗಳನ್ನು ಚೂ ಬಿಟ್ಟು ಅಪಹರಣ-ಅತ್ಯಾಚಾರಗಳನ್ನು ಜಾರಿಯಲ್ಲಿರಿಸಿದ್ದಾನೆ.
ಮಾರ್ಕೆಟ್ ಬಿದ್ದ ಜಾಗದಲ್ಲಿ ಫಿಲಾಸಫಿಯ ಫಸಲು ಎದ್ದಿರುವುದ ಕಂಡಿರಾ? (ತೆರೆದ ಕಿಟಕಿ)ಇಂಥ ಉದಾಹರಣೆಗಳನ್ನು ಬೆಳೆಸುತ್ತಲೇ ಹೋಗಬಹುದು. ಅರಬ್ ನೆಲದಲ್ಲಿ ಇವತ್ತಿಗೆ ತುಂಬ ನಾಗರಿಕವಾಗಿವೆ ಎಂದು ತೋರುತ್ತಿರುವ ದೇಶಗಳಲ್ಲಿ ಸಹ ಪರಿಸ್ಥಿತಿ ಬದಲಾಗಿಬಿಡಬಹುದಾದ ಬೆದರಿಕೆ ನಿರಂತರವಾಗಿದೆ. ಉದಾಹರಣೆಗೆ, ಬಹರೈನ್ ಎಂಬ ಪ್ರತಿಷ್ಟಿತ ದೇಶವನ್ನೇ ಗಮನಿಸಿ. ಸದ್ಯಕ್ಕೆ ಎಲ್ಲವೂ ಚೆಂದದಲ್ಲಿದೆ. ಆದರೆ ಅಲ್ಲಿನ ಜನಸಂಖ್ಯೆಯ 60-70 ಭಾಗವಾಗಿರುವ ಶಿಯಾಗಳನ್ನು ಆಳುತ್ತಿರುವುದು ಸುನ್ನಿ ರಾಜಪ್ರಭುತ್ವ. ಇದು ಇನ್ಯಾವಾಗ ಜಾಗತಿಕ ರಾಜಕಾರಣದ ದಾಳವಾಗಲಿದೆಯೋ ಅದು ಕೇವಲ ಕಾಲದ ಲೆಕ್ಕವಷ್ಟೆ. ಸೌದಿ, ಕತಾರ್ ಸೇರಿದಂತೆ ಎಲ್ಲ ಕಡೆಗಳಲ್ಲೂ ಈ ಶಿಯಾ-ಸುನ್ನಿ ಸಂಘರ್ಷ ಕಥಾನಕಗಳು ಯಾವಾಗಲಾದರೂ ತೆರೆದುಕೊಂಡಾವು. ಶಿಯಾ ಬಹುಸಂಖ್ಯಾತ ಇರಾನ್ ಹಾಗೂ ಸುನ್ನಿ ಬಹುಸಂಖ್ಯಾತ ಸೌದಿ ಅರೇಬಿಯಗಳು ವೈರಿಗಳಾಗಿರುವುದೇ ಈ ಕಾರಣಕ್ಕೆ. ಮತ್ತು ಈ ವೈರತ್ವ ಕೇವಲ ಅಧಿಕಾರ ಬದಲಾವಣೆಗಳಲ್ಲಿ ಕೊನೆಗೊಳ್ಳುವುದಿಲ್ಲ, ಬದಲಿಗೆ ಅಧಿಕಾರ ಕಳೆದುಕೊಳ್ಳುವ ಪಾಳೆಯವು ಅದು ಇಸ್ಲಾಮಿನದ್ದೇ ಭಾಗವಾಗಿದ್ದರೂ ತನ್ನನ್ನು ಕೊಲೆ ಮತ್ತು ಅತ್ಯಾಚಾರಗಳಿಗೆ ತೆರೆದಿಟ್ಟುಕೊಳ್ಳಬೇಕಾಗುತ್ತದೆ!
ಇದಕ್ಕೆಲ್ಲ ಧರ್ಮ ಕಾರಣ ಎಂದು ಕೆಲವರು ಹೇಳಿಬಿಡಬಹುದು. ಕೇವಲ ಗಲ್ಫ್ ಅಂತಲ್ಲ, ಯಾವ ದೇಶದಲ್ಲಿ ಬೇಕಾದರೂ ಹೀಗಾಗುತ್ತದೆ ಎಂದೆಲ್ಲ ಸಾಮಾನ್ಯೀಕರಿಸುವುದಕ್ಕೂ ಹಲವರು ಪ್ರಯತ್ನಿಸುತ್ತಾರೆ. ಆದರೆ ವಾಸ್ತವವೇನೆಂದರೆ ಅರಬ್ ನೆಲದ ಈ ಉದಾಹರಣೆಗಳಿದೆ ಧರ್ಮ ಕಾರಣವಲ್ಲ, ಬದಲಿಗೆ 'ಧರ್ಮ' ಇಲ್ಲದಿರುವುದೇ ಕಾರಣ!
ಭಾರತದ ನಾಗರಿಕತೆಯ ಮಾದರಿ
ನಿಜ. ಭಾರತದಲ್ಲೂ ಯುದ್ಧಗಳಾಗಿವೆ. ಆದರೆ ಮುಸ್ಲಿಂ ಆಕ್ರಮಣಕಾರರು ಭಾರತಕ್ಕೆ ಎರಗುವುದಕ್ಕೂ ಮುಂಚೆ ಯುದ್ಧಗಳಲ್ಲೊಂದು ಧರ್ಮವಿತ್ತು. ಈ ಮಾತನ್ನು ಈಗಿನ ಅರ್ಥದಲ್ಲಿ ತೆಗೆದುಕೊಳ್ಳುವುದಕ್ಕಾಗುವುದಿಲ್ಲ. ಧರ್ಮವಿತ್ತು ಎಂಬುದರ ಅರ್ಥ ಯುದ್ಧರಂಗದಲ್ಲೂ ಸರಿ-ತಪ್ಪುಗಳಿದ್ದವು, ಅಲ್ಲೊಂದು ಚೌಕಟ್ಟಿತ್ತು ಎಂದರ್ಥ. ಆಧುನಿಕರು ಒಪ್ಪಿಕೊಳ್ಳುವ ಇತಿಹಾಸವನ್ನೇ ಗಣನೆಗೆ ತೆಗೆದುಕೊಳ್ಳುವುದಾದರೂ ಮೌರ್ಯ ಸಾಮ್ರಾಜ್ಯವು ಭಾರತದ ಅತಿ ವಿಸ್ತಾರದ ಸಾಮ್ರಾಜ್ಯ. ಅದಕ್ಕಿಂತ ಪೂರ್ವದಲ್ಲಿ ಭಾರತವು 16 ಮಹಾಜನಪದಗಳಲ್ಲಿ ಹಂಚಿತ್ತೆಂಬ ಚಿತ್ರಣವು ಬೌದ್ಧ - ಜೈನ ಉಲ್ಲೇಖಗಳಿಂದ ಸ್ಪಷ್ಟವಾಗುತ್ತದೆ. ಮೌರ್ಯ ಸಾಮ್ರಾಜ್ಯ ವಿಸ್ತರಿಸಿತು ಎಂದರೆ ಅದರರ್ಥ ಅದು ಅನೇಕ ಮಹಾಜನಪದಗಳನ್ನು ಗೆದ್ದಿತು, ತನ್ನಲ್ಲಿ ಅರಗಿಸಿಕೊಂಡಿತು ಎಂಬುದೇ ಅರ್ಥ ಎನ್ನುವುದೇನೋ ಸರಿಯೇ. ಹಾಗೆಂದು ಅವ್ಯಾವ ವಿಜಯಗಳನ್ನೂ ಜಗತ್ತಿನ ಉಳಿದೆಲ್ಲ ಯುದ್ಧಗಳಿಗೆ ಹೋಲಿಸುವಂತಿಲ್ಲ. ಏಕೆಂದರೆ, ಜನಸಾಮಾನ್ಯರ ಬದುಕನ್ನು ಈ ವಿಜಯಗಳು ಕದಡಲಿಲ್ಲ. ರಾಜ ಬದಲಾದೊಡನೆ ಪೂಜಾ ಪದ್ಧತಿಗಳು ಪ್ರಶ್ನೆಗೊಳಗಾಗಲಿಲ್ಲ. ಪೂಜಾಸ್ಥಾನಗಳ ಆವರಣಕ್ಕೆ ಸೇನೆ ಬರಲೇ ಇಲ್ಲ.
ಬಿಹಾರ ಮತ್ತು ಬಂಗಾಳಗಳ ಭಾಗಗಳನ್ನೊಳಗೊಂಡಿದ್ದ ಮಹಾಜನಪದ ಅಂಗ ದೇಶ. ಬಿಂಬಿಸಾರನ ಕಾಲದಲ್ಲಿ ಮಗಧ ಸೇನೆ ಇದನ್ನು ಗೆದ್ದ ಬಳಿಕವೂ ಅಲ್ಲಿನ ಚಂಪಾ ಪ್ರಮುಖ ಧಾರ್ಮಿಕ ಸ್ಥಳವಾಗಿಯೇ ಮುಂದುವರಿಯಿತು. ಅಜಾತಶತ್ರುವು ವೃಜ್ಜಿಗಣವನ್ನು ಗೆದ್ದುಕೊಂಡ ಮೇಲೂ ವೈಶಾಲಿಯ ಬೌದ್ಧ ಮತ್ತು ಜೈನ ಕ್ಷೇತ್ರಗಳ ಘನತೆಗೆ ಯಾವ ಕುಂದುಂಟಾಗಲಿಲ್ಲ. ಆವಂತಿಯು ಮಗಧದ ಪಾಲಾದಾಗಲೂ ಉಜ್ಜಯನಿಯ ದೇವಾಲಯ ಸಂಸ್ಕೃತಿಗೆ ಒಂದಿನಿತೂ ಧಕ್ಕೆ ಆಗಲಿಲ್ಲ.
Maha Shivaratri: ಶಿವನ ಲಯವೆಂಬುದು ವಿಧ್ವಂಸವೇ? (ತೆರೆದ ಕಿಟಕಿ)ಶತಾವಧಾನಿ ಡಾ. ಆರ್. ಗಣೇಶ್ ಅವರು 'ಭಾರತೀಯ ಕ್ಷಾತ್ರಪರಂಪರೆ' ಪುಸ್ತಕದಲ್ಲಿ ಹೀಗೆ ಬರೆದಿದ್ದಾರೆ: "ಅರ್ಥಶಾಸ್ತ್ರ-ಧರ್ಮಶಾಸ್ತ್ರಾದಿಗಳು ವಿಜಿಗೀಷುಗಳಾದ ರಾಜರನ್ನು ಧರ್ಮವಿಜಯಿ, ಲೋಭ ವಿಜಯಿ, ಮತ್ತು ಅಸುರ ವಿಜಯಿ ಎಂದು ಮುಬ್ಬಗೆಯಾಗಿ ವಿಂಗಡಿಸಿವೆ. ಈ ಪೈಕಿ ಧರ್ಮವಿಜಯಿಯೇ ಉತ್ತಮ. ಅವನು ಸೋತವರಿಂದ ಕೇವಲ ಸಾಂಕೇತಿಕವಾದ ಕಪ್ಪವನ್ನು ಸ್ವೀಕರಿಸುತ್ತಾನೆ. ಲೋಭವಿಜಯಿಯು ಮಧ್ಯಮ. ಇವನು ಸೋತವರ ರಾಜ್ಯ-ಭಂಡಾರಗಳನ್ನೂ ಕಸಿಯುತ್ತಾನೆ. ಅಸುರವಿಜಯಿಯು ಅಧಮ. ಇವನು ಸೋತವರನ್ನೆಲ್ಲ ಕೊಂದು, ದೇಶ-ಕೋಶಗಳನ್ನೆಲ್ಲ ಕಸಿದುಕೊಳ್ಳುತ್ತಾನೆ. ದುರ್ದೈವವೆಂದರೆ ಇಸ್ಲಾಮಿನ ದಾಳಿಯೆಲ್ಲ ಅಸುರವಿಜಯಿಗಿಂತ ಅಧಮಾಧಮ. ಅದು ಸೋತವರ ಸಂಸಾರಗಳನ್ನು ಹಾಳ್ಗೆಡವಿ ಹೆಂಡಿರು-ಮಕ್ಕಳನ್ನೂ ಅತ್ಯಾಚಾರಾದಿಗಳಿಗೆ ಗುರಿ ಮಾಡಿ ಪೈಶಾಚಿಕಾನಂದವನ್ನು ಗಳಿಸಿತು. ಮಾತ್ರವಲ್ಲ, ಇಡಿಯ ಪರಾಜಿತಪ್ರದೇಶದ ಪ್ರಜೆಗಳನ್ನು ಇದೇ ರೀತಿ ಶೋಷಿಸಿತು; ಒತ್ತಾಯದ ಮತಾಂತರ ಹಾಗೂ ದೇವಾಲಯಾದಿಗಳ ಧ್ವಂಸದಿಂದ ಜಗತ್ತು ಕಂಡರಿಯದ ಕರಾಳಗಾಥೆಯನ್ನು ರುಧಿರಾಕ್ಷರಗಳಲ್ಲಿ ರಚಿಸಿತು. ಕ್ರೈಸ್ತಮತದ ಚರಿತ್ರೆಯಾದರೂ ಇದಕ್ಕಿಂತ ತೀರ ಭಿನ್ನವೇನಲ್ಲ. ಕಮ್ಯುನಿಸ್ಟರ ದೌರ್ಜನ್ಯಗಳಾದರೂ ಇವಕ್ಕಿಂತ ಕಡಿಮೆ ಮಟ್ಟದವಲ್ಲ."
ಇಂಥ ಆಧಾರಸಿದ್ಧ ಆಕರಗಳನ್ನು ಮುಂದಿರಿಸಿದಾಗಲೆಲ್ಲ ಎಡಪಂಥೀಯ ಚರಿತ್ರಕಾರರೆನಿಸಿಕೊಂಡವರು ಒಂದು ಹುಸಿಬಾಂಬ್ ಒಗೆಯುತ್ತಾರೆ. ಅವರ ಪ್ರಕಾರ ಹಿಂದು ರಾಜರು ಬೌದ್ಧ ಪೂಜಾಸ್ಥಾನಗಳನ್ನು ನಾಶಪಡಿಸಿದ್ದಾರೆ ಹಾಗೂ ಶಿವ-ವಿಷ್ಣು ಕುರಿತ ನಂಬಿಕೆಗಳ ವಿಚಾರದಲ್ಲಿ ಕದನಗಳು ನಡೆದಿವೆ. ಆದರೆ, ಇವಕ್ಕೆ ಬೇಕಾದ ಗಟ್ಟಿ ಸಾಕ್ಷ್ಯಗಳೇನನ್ನೂ ಇವರ್ಯಾರೂ ಮುಂದು ಮಾಡುವುದಿಲ್ಲ. ಅದೇನೇ ಇರಲಿ. ಕಣ್ಣೆದುರೇ ಕೊನೆಯಿಲ್ಲದಂತೆ ತೆರೆದುಕೊಳ್ಳುತ್ತಿರುವ ಇಸ್ಲಾಂ ದೇಶಗಳ ಅಂತರ್ಯುದ್ಧಗಳು ಸತ್ಯವೊಂದನ್ನು ಸರಳವಾಗಿ ನಮ್ಮೆಲ್ಲರ ಮುಂದಿರಿಸುತ್ತಿವೆ!
- ಚೈತನ್ಯ ಹೆಗಡೆ
cchegde@gmail.com
Post a Comment