ಜನಸಂಖ್ಯೆಗನುಗುಣವಾಗಿ ಹಣ ಬಳಕೆ ಮಾಡುತ್ತಿದ್ದೇವೆ. ಇದನ್ನು ಮರೆಮಾಚಲು ಬಿಜೆಪಿಯವರು ಪರಿಶಿಷ್ಟರ ಅಭಿವೃದ್ಧಿಗೆ ಹಣವನ್ನು ಬೇರೆ ರೀತಿ ವರ್ಗಾವಣೆ ಮಾಡಲಾಗಿದೆ ಎಂದು ಟೀಕೆ ಮಾಡುತ್ತಿದ್ದಾರೆ. ಇಂತಹ ಹೇಳಿಕೆಗಳನ್ನು ನೀಡಲು ಬಿಜೆಪಿಯವರಿಗೆ ನಾಚಿಕೆಯಾಗಬೇಕು ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಆಡಳಿತದಲ್ಲಿರುವ ಯಾವ ರಾಜ್ಯದಲ್ಲಿ ಎಸ್ ಸಿಪಿ, ಟಿಎಸ್ ಪಿ ಕಾಯ್ದೆಯಿಲ್ಲ, ಟೀಕೆ ಮಾಡುವ ಬಿಜೆಪಿಯು ಕೇಂದ್ರದಲ್ಲಿ ಕೇಂದ್ರದಲ್ಲಿ ಎಸ್ ಸಿಪಿ, ಟಿಎಸ್ ಪಿಯನ್ನು ಜಾರಿಗೊಳಿಸಲಿ ಎಂದು ಸವಾಲು ಹಾಕಿದರು.
ಈ ಹಿಂದೆ ಪರಿಶಿಷ್ಟ ಜಾತಿ/ಪಂಗಡದವರಿಗೆ ಕಡಿಮೆ ಹಣ ನಿಗದಿ ಮಾಡಲಾಗುತ್ತಿತ್ತು. ನಮ್ಮ ಸರ್ಕಾರ ಕಾಯ್ದೆ ತಂದ ಪರಿಣಾಮ ಈ ವರ್ಷ 32 ಸಾವಿರ ಕೋಟಿ ರೂ.ಗಳನ್ನು ನಿಗದಿ ಮಾಡಲಾಗಿದೆ. ಬಡ್ತಿ ಮೀಸಲಾತಿಗೆ ಇಡೀ ದೇಶದಲ್ಲೇ ನಾವು ಕಾಯ್ದೆ ರೂಪಿಸಿದ್ದೇವೆ. ಬಿಜೆಪಿಯವರು ಸಾಮಾಜಿಕ ನ್ಯಾಯ ಹಾಗೂ ಸಂವಿಧಾನಕ್ಕೆ ವಿರುದ್ಧವಾಗಿದ್ದಾರೆ ಎಂದರು.
ಮಹಿಳೆಯರಿಗೆ, ಪರಿಶಿಷ್ಟರಿಗೆ, ಶೋಷಿತರಿಗೆ ಸಮಾನತೆ ನೀಡುವ ಆಶಯವನ್ನು ಸಂವಿಧಾನ ಹೊಂದಿದೆ. ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವದ ಉದ್ದೇಶ ಕೂಡ ಸಮಾನತೆಯಾಗಿದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತಿವೆ. ಜನರಿಗೆ ಖರೀದಿಸುವ ಶಕ್ತಿ ಇಲ್ಲದೇ ಹೋದರೆ ಆರ್ಥಿಕ ಚಟುವಟಿಕೆಗಳು ಕುಸಿಯುತ್ತದೆ ಎಂದು ಹೇಳಿದರು.
ಜಾತಿ ವ್ಯವಸ್ಥೆಗೆ ಚಲನಶೀಲತೆ ಇಲ್ಲ, ವಿದ್ಯಾವಂತರೇ ಜಾತಿ ಮಾಡುತ್ತಿದ್ದಾರೆ. ಅಂಬೇಡ್ಕರ್ರವರು ತಮ್ಮ ಜ್ಞಾನದಿಂದ ಶೋಷಣೆ ಮುಕ್ತ ಸಮಾಜ ನಿರ್ಮಿಸಲು ಬಳಕೆ ಮಾಡಿದ್ದರು. ಅಂಬೇಡ್ಕರವರ ಮೂಲಮಂತ್ರ ಹಾಗೂ ಆಶಯಗಳನ್ನು ಎಲ್ಲರೂ ಪಾಲನೆ ಮಾಡಬೇಕು. ಪ್ರತಿಯೊಬ್ಬರೂ ವಿದ್ಯಾವಂತರಾಗಬೇಕು. ಸಂಘಟಿತರಾಗಬೇಕು. ಅಂಬೇಡ್ಕರ್ ಇಲ್ಲದಿದ್ದರೆ ಶೋಷಿತರಿಗೆ ನ್ಯಾಯ ಸಿಗುತ್ತಿರಲಿಲ್ಲ ಎಂದರು.
ಅವಕಾಶವಂಚಿತರಿಗಾಗಿ ನಾವೆಲ್ಲಾ ಹೋರಾಟ ಮಾಡಲು ಜೀವನ ಮುಡಿಪಾಗಿಡಬೇಕು. ತಮ್ಮ ಸರ್ಕಾರ ಪರಿಶಿಷ್ಟರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರಿಗೆ ಗುತ್ತಿಗೆ ನೀಡಿ ಮೀಸಲಾತಿ ನೀಡಲು ನಿರ್ಧಾರ ತೆಗೆದುಕೊಂಡಿದ್ದೇವೆ. ಅಲ್ಪಸಂಖ್ಯಾತರಿಗೆ ಗುತ್ತಿಗೆಯಲ್ಲಿ ಮೀಸಲಾತಿ ನೀಡಿದ್ದನ್ನು ಓಲೈಕೆಯ ರಾಜಕೀಯ ಎಂದು ದೊಡ್ಡ ಪ್ರಮಾಣದಲ್ಲಿ ಅಪಪ್ರಚಾರ ಮಾಡಿದರು. ಮುಸ್ಲಿಮರಿಗೆ ಆರ್ಥಿಕ, ಸಾಮಾಜಿಕ ಸಾಮರ್ಥ್ಯ ಇಲ್ಲ. ಯಾರಿಗೆ ಅವಕಾಶ ಸಿಗುವುದಿಲ್ಲವೋ ಅವರಿಗೆ ನ್ಯಾಯ ದೊರಕಿಸಲು ನಮ್ಮ ಸರ್ಕಾರ ಪ್ರಯತ್ನಿಸಬೇಕು ಎಂದರು. ನನ್ನನ್ನು ಮೇಲ್ವರ್ಗದ ವಿರೋಧಿ ಎಂದು ಬಿಂಬಿಸುವ ಪ್ರಯತ್ನ ನಡೆದಿದೆ. ನಾನು ಯಾರ ವಿರೋಧಿಯೂ ಅಲ್ಲ. ಅಂಬೇಡ್ಕರ್ ಆಶಯದಂತೆ ಶೋಷಿತರ ಪರವಾಗಿ ನಾನು ಕೆಲಸ ಮಾಡುತ್ತೇನೆ ಎಂದರು.
ಶಿಕ್ಷಣಕ್ಕೆ ಒತ್ತು ನೀಡಬೇಕೆಂಬ ಸಲುವಾಗಿ ಪ್ರತಿ ಹೋಬಳಿಗೊಂದು ವಸತಿ ಶಾಲೆ ಆರಂಭಿಸಲು ನಿರ್ಧರಿಸಲಾಗಿದೆ. ಈ ವರ್ಷ 26 ವಸತಿ ಶಾಲೆಗಳನ್ನು ಮಂಜೂರು ಮಾಡಿದ್ದೇವೆ. ಬಡವರ ಮಕ್ಕಳು ಕೂಡ ವೈದ್ಯರು, ಇಂಜಿನಿಯರುಗಳಾಗಬೇಕು. ಇದೇ ನಮ್ಮ ಸರ್ಕಾರದ ಆಶಯ ಎಂದು ಹೇಳಿದರು.
ಪರಿಶಿಷ್ಟರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಕಡಿಮೆಯಿತ್ತು. ಈ ಹಿನ್ನೆಲೆಯಲ್ಲಿ 13 ಡಿಸಿಆರ್‌ಇ ಪೊಲೀಸ್ ಠಾಣೆಗಳನ್ನು ಇಂದು ಮಧ್ಯರಾತ್ರಿಯಿಂದಲೇ ಆರಂಭಿಸಲಾಗಿದೆ ಎಂದರು.
ಮೈಸೂರು ವಿಶ್ವವಿದ್ಯಾಲಯದಲ್ಲಿ ಸಂವಿಧಾನ ಪೀಠ ಸ್ಥಾಪಿಸಲಾಗುವುದು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅಂಬೇಡ್ಕರ್ ವಸ್ತುಪ್ರದರ್ಶನ ಆರಂಭಿಸಿ ಎಲ್ಲಿಯೂ ಇಲ್ಲದಷ್ಟು ದೊಡ್ಡ ಪ್ರತಿಮೆಯನ್ನು ಸ್ಥಾಪಿಸಲಾಗುತ್ತದೆ. ಎಂದು ಹೇಳಿದರು.
ಇದಕ್ಕೂ ಮೊದಲು ಮುಖ್ಯಮಂತ್ರಿಯವರು ವಿಧಾನಸೌಧದ ಮುಂದಿನ ಅಂಬೇಡ್ಕರ್ ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಮಾಹಿತಿ ಸೌಧದ ಸಮೀಪ ಅಂಬೇಡ್ಕರ್ ಸ್ಪೂರ್ತಿ ಸೌಧಕ್ಕೆ ಶಂಕುಸ್ಥಾಪನೆ. ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಎಚ್.ಸಿ.ಮಹದೇವಪ್ಪ, ಕೆ.ಎಚ್.ಮುನಿಯಪ್ಪ, ಶಾಸಕರಾದ ರಿಜ್ವಾನ್ ಹರ್ಷದ್, ಪಿ.ಎಂ.ನರೇಂದ್ರಸ್ವಾಮಿ ಮತ್ತಿತರರಿದ್ದರು.
Post a Comment