ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಹೇಳಿಕೆಗಳನ್ನು ನಾವು ಅನುಮತಿಸುವುದಿಲ್ಲ, ಈ ಬಾರಿ ಸಾವರ್ಕರ್, ಮುಂದಿನ ಬಾರಿ ಯಾರಾದರೂ ಮಹಾತ್ಮಾ ಗಾಂಧಿ ಬ್ರಿಟಿಷರ ಸೇವಕರಾಗಿದ್ದರು ಎಂದು ಹೇಳುತ್ತಾರೆ ಅದೆಲ್ಲಾ ಕೇಳಬೇಕೇ?, ಮುಂದಿನ ಬಾರಿ ಅಂತಹ ಹೇಳಿಕೆಗಳನ್ನು ನೀಡಿದರೆ ನಾವು ಅದನ್ನು ತೀರಾ ಗಂಭೀರವಾಗಿ ತೆಗೆದುಕೊಳ್ಳಬೇಕಾಗುತ್ತದೆ ಎಂದು ಪೀಠ ಎಚ್ಚರಿಸಿದೆ.
ಸಾವರ್ಕರ್ ವಿರುದ್ಧದ ಹೇಳಿಕೆಗಳಿಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ವಿರುದ್ಧ ಲಕ್ನೋ ನ್ಯಾಯಾಲಯದಲ್ಲಿ ಬಾಕಿ ಇರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ವಿಚಾರಣೆಗೆ ನ್ಯಾಯಾಲಯ ತಡೆ ನೀಡಿದ್ದರೂ, ಭವಿಷ್ಯದಲ್ಲಿ ಅವರು ಅಂತಹ ಯಾವುದೇ ಹೇಳಿಕೆಗಳನ್ನು ನೀಡಿದರೆ ಅವರ ವಿರುದ್ಧ ಸ್ವಯಂ ಪ್ರೇರಿತವಾಗಿ ಮೊಕದ್ದಮೆ ಹೂಡಲಾಗುವುದು ಎಂದು ಮೌಖಿಕವಾಗಿ ಎಚ್ಚರಿಸಿದೆ.
ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ಮನಮೋಹನ್ ಅವರನ್ನೊಳಗೊಂಡ ಪೀಠವು ಈ ಪ್ರಕರಣದ ವಿಚಾರಣೆ ನಡೆಸಿತು. ಪ್ರಕರಣ ಕೈಗೆತ್ತಿಕೊಂಡ ತಕ್ಷಣ, ನ್ಯಾಯಮೂರ್ತಿ ದತ್ತ ಅವರು ರಾಹುಲ್ ಗಾಂಧಿಯವರ ಹೇಳಿಕೆಗಳಿಗೆ ಆಕ್ಷೇಪ ವ್ಯಕ್ತಪಡಿಸಿದರು.
ವಕೀಲರಿಗೆ ಪ್ರಶ್ನೆ ಮಾಡಿದ ನ್ಯಾ. ದತ್ತ ವೈಸರಾಯ್ಗೆ ಮಹಾತ್ಮಾ ಗಾಂಧಿ ಬರೆದ ಪತ್ರದಲ್ಲೂ ‘Your Faithful Servant’ ಎಂಬ ಪದವನ್ನು ಬಳಸಿದ್ದಾರೆ ಎನ್ನುವ ಕಾರಣಕ್ಕೆ ಮಹಾತ್ಮ ಗಾಂಧಿಯನ್ನು ಬ್ರಿಟಿಷರ ಸೇವಕ ಎಂದು ಕರೆಯಬಹುದೇ ಎಂದು ಪ್ರಶ್ನಿಸಿದರು.
ಅವರು ಒಂದು ರಾಜಕೀಯ ಪಕ್ಷದ ರಾಜಕೀಯ ನಾಯಕರೇ? ನೀವು ಮಹಾರಾಷ್ಟ್ರಕ್ಕೆ ಹೋಗಿ ಹೇಳಿಕೆ ನೀಡಿ, ಅಲ್ಲಿ ಅವರನ್ನು ಪೂಜಿಸಲಾಗುತ್ತದೆ. ಹೀಗೆ ಮಾಡಬೇಡಿ ಎಂದು ನ್ಯಾಯಮೂರ್ತಿ ದತ್ತ ಹೇಳಿದರು.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸಾವರ್ಕರ್ ಬ್ರಿಟಿಷರ ಸೇವಕ ಮತ್ತು ಅವರು ಬ್ರಿಟಿಷರಿಂದ ಪಿಂಚಣಿ ಪಡೆದಿದ್ದರು ಎಂದು ರಾಹುಲ್ ಗಾಂಧಿ ಮಾಡಿದ ಭಾಷಣಕ್ಕಾಗಿ ಸಮನ್ಸ್ ಜಾರಿ ಮಾಡಲಾಗಿತ್ತು.
ಸಮಾಜದಲ್ಲಿ ದ್ವೇಷವನ್ನು ಹರಡುವ ಉದ್ದೇಶದಿಂದ ರಾಹುಲ್ ಗಾಂಧಿ ಸಾವರ್ಕರ್ ಅವರನ್ನು ಬ್ರಿಟಿಷರ ಸೇವಕ ಎಂದು ಕರೆದಿದ್ದಾರೆ, ಹಾಗೂ ಬ್ರಿಟಿಷರಿಂದ ಪಿಂಚಣಿ ಪಡೆದಿದ್ದಾರೆ ಎಂದು ಹೇಳಿರುವುದಾಗಿ ವಕೀಲ ನೃಪೇಂದ್ರ ಪಾಂಡೆ ದೂರು ದಾಖಲಿಸಿದ್ದಾರೆ.
Post a Comment