ಕ: ಬಾಂಗ್ಲಾದೇಶದಾದ್ಯಂತ ಸೋಮವಾರ ನಡೆದ ಇಸ್ರೇಲ್ ವಿರೋಧಿ ಪ್ರತಿಭಟನೆ ಹಿಂಸೆಗೆ ತಿರುಗಿದ್ದು ಗುಂಪೊಂದು ಇಸ್ರೇಲ್ ಸಂಬಂಧಿತ ವ್ಯಾಪಾರ ಸಂಸ್ಥೆಗಳಾದ ಬಾಟ, ಕೆಎಫ್‍ಸಿ ಮತ್ತು ಪಿಝಾ ಹಟ್‍ ಗಳನ್ನು ಗುರಿಯಾಗಿಸಿ ದಾಳಿ ನಡೆಸಿರುವುದಾಗಿ ವರದಿಯಾಗಿದೆ.


ಗಾಝಾದಲ್ಲಿ ಇಸ್ರೇಲ್‍ ನ ಆಕ್ರಮಣವನ್ನು ತಕ್ಷಣ ಅಂತ್ಯಗೊಳಿಸುವಂತೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಸಂಘಟನೆಗಳ ಸದಸ್ಯರು, ವಿದ್ಯಾರ್ಥಿಗಳು ಹಾಗೂ ವೃತ್ತಿಪರರು ಪಾಲ್ಗೊಂಡಿದ್ದರು.ಬೋಗ್ರ, ಸಿಲ್ಹೆಟ್ ಮತ್ತು ಕಾಕ್ಸ್ ಬಝಾರ್ ಪ್ರದೇಶಗಳಲ್ಲಿ ವ್ಯಾಪಕ ಹಿಂಸಾಚಾರ, ದಾಂಧಲೆ ನಡೆದಿರುವ ವರದಿಯಾಗಿದೆ.


ಪ್ರತಿಭಟನೆ ಸಂದರ್ಭ ಅಂಗಡಿಗಳನ್ನು ಧ್ವಂಸಗೊಳಿಸಿರುವುದಕ್ಕೆ ಸಂಬಂಧಿಸಿ ಪೊಲೀಸರು ಕನಿಷ್ಠ 49 ಜನರನ್ನು ಬಂಧಿಸಿದ್ದಾರೆ.


ಢಾಕಾದಲ್ಲಿ ಅಮೆರಿಕ ರಾಯಭಾರಿ ಕಚೇರಿಯ ಎದುರು ಪ್ರತಿಭಟನೆ ನಡೆಸಿದ ಗುಂಪು ಅಮೆರಿಕ ವಿರೋಧಿ ಘೋಷಣೆ ಕೂಗಿದೆ. ಪ್ರತಿಭಟನಾ ರ್ಯಾಲಿಯಲ್ಲಿ ಕೆಲವರು ಫೆಲೆಸ್ತೀನ್ ಧ್ವಜ ಹಿಡಿದು ಫೆಲೆಸ್ತೀನ್ ಪರ ಘೋಷಣೆ ಮೊಳಗಿಸಿದ್ದಾರೆ. ಹಿಂಸಾಚಾರ ನಡೆಸಿದ ದುಷ್ಕರ್ಮಿಗಳನ್ನು ಪ್ರತಿಭಟನೆಯ ವೀಡಿಯೊ ದೃಶ್ಯಾವಳಿಯ ಆಧಾರದಲ್ಲಿ ಗುರುತಿಸಿ ಬಂಧಿಸಲಾಗುವುದು ಎಂದು ಐಜಿಪಿ ಬಹಾರುಲ್ ಆಲಂ ಹೇಳಿದ್ದಾರೆ.


ಮುಖ್ಯ ಸಲಹೆಗಾರ ಮುಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರಕಾರ ಹಿಂಸಾಚಾರವನ್ನು ಖಂಡಿಸಿದ್ದರೆ, ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ಅವಾಮಿ ಲೀಗ್, ದೇಶದಲ್ಲಿನ ಬೆಳವಣಿಗೆಯು ಉಗ್ರವಾದ ಅಪಾಯಕಾರಿ ರೀತಿಯಲ್ಲಿ ಹೆಚ್ಚುತ್ತಿರುವ ಸೂಚನೆಯಾಗಿದೆ ಎಂದು ಟೀಕಿಸಿದೆ. ಇದು ರಾಜಕೀಯ ಬಿಕ್ಕಟ್ಟಲ್ಲ, ರಾಷ್ಟ್ರೀಯ ತುರ್ತು ಪರಿಸ್ಥಿತಿಯಾಗಿದೆ. ಅಂತರಾಷ್ಟ್ರೀಯ ಸಮುದಾಯ ಮೌನವಾಗಿದ್ದರೆ ಬಾಂಗ್ಲಾದೇಶವು ಮತ್ತೊಂದು ಅಫ್ಘಾನಿಸ್ತಾನ ಆಗುವ ಅಪಾಯವಿದೆ ಎಂದು ಅವಾಮಿ ಲೀಗ್ ಹೇಳಿದೆ.

Post a Comment

Previous Post Next Post