ಭಾರತವೂ ಸೇರಿದಂತೆ ಎಲ್ಲೆಡೆ ಷೇರು ಮಾರುಕಟ್ಟೆಯ ಮೌಲ್ಯಗಳು ಕುಸಿದುಬೀಳುತ್ತಿರುವುದರ ಸುದ್ದಿಯದ್ದೇ ಗೌಜು. ಅಮೆರಿಕವೂ ಇದಕ್ಕೇನೂ ಹೊರತಾಗಿಲ್ಲ.
"ಅಲ್ಲಪ್ಪ, ವ್ಯಾಪಾರ ಕೊರತೆ ಹೊಂದಿರುವ ದೇಶಗಳಿಗೆಲ್ಲ ಹೆಚ್ಚಿಸಿರುವ ತೆರಿಗೆ ಸುಂಕದಿಂದ ಇಷ್ಟೆಲ್ಲ ಬಿಲಿಯನ್ ಡಾಲರ್ ಹಣ ಸಂಗ್ರಹವಾಗಲಿದೆ ಎನ್ನುತ್ತಿರುವ ನೀನು, ಅತ್ತ ಮಾರುಕಟ್ಟೆಯಲ್ಲಿ ಟ್ರಿಲಿಯನ್ ಡಾಲರ್ ಸಂಪತ್ತು ಮೌಲ್ಯ ಕಳೆದುಕೊಂಡಿರುವುದರ ಬಗ್ಗೆ ಮಾತೇ ಆಡುತ್ತಿಲ್ಲವಲ್ಲ" ಎಂದೆಲ್ಲ ಎಕ್ಸ್ ಇತ್ಯಾದಿ ಸಾಮಾಜಿಕ ಮಾಧ್ಯಮದಲ್ಲಿ ಅಮೆರಿಕನ್ನರು ಪ್ರಶ್ನೆಗಳನ್ನು ತೂರುತ್ತಿದ್ದಾರೆ.
ಕೆಲವು ವಿಶ್ಲೇಷಕರು ಇದರ ಹಿಂದಿರುವ ತರ್ಕವನ್ನು ವ್ಯಾಖ್ಯಾನಿಸುವುದಕ್ಕೂ ಪ್ರಯತ್ನಿಸಿದ್ದಾರೆ. ಹೀಗೆ ಶೇರು ಮಾರುಕಟ್ಟೆ ಜಗತ್ತಿನಾದ್ಯಂತ ಅಸ್ಥಿರತೆಗೆ ಸಿಲುಕಿದಾಗ ಹೂಡಿಕೆ ಮಾಡುವವರಿಗೆ ಸರ್ಕಾರಿ ಬಾಂಡುಗಳೇ ವಿಶ್ವಾಸಾರ್ಹ ಎನಿಸುತ್ತದೆ. ಹೀಗಂದುಕೊಂಡವರು ಅಮೆರಿಕ ಸರ್ಕಾರ ಹೊರಡಿಸುವ ಬಾಂಡುಗಳನ್ನು ಹೆಚ್ಚು ಹೆಚ್ಚು ಕೊಳ್ಳತೊಡಗಿದಾಗ, ಅಮೆರಿಕಕ್ಕೆ ಬಾಂಡ್ ಮೇಲೆ ಕೊಡುವ ಬಡ್ಡಿಯನ್ನು ಇಳಿಸುವ ಅವಕಾಶ ಬರುತ್ತದೆ. ಅಂದರೆ ಸಾರ್ವಜನಿಕರ ಹಣವನ್ನು ಅಮೆರಿಕ ಸರ್ಕಾರವು ಕಡಿಮೆ ಬಡ್ಡಿಗೆ ದುಡಿಸಿಕೊಳ್ಳಬಹುದು ಎಂದೆಲ್ಲ ವಿಶ್ಲೇಷಣೆಗಳಿವೆ.
ಆದರೆ, ಇಷ್ಟೆಲ್ಲ ಆಗುವವರೆಗೆ ಪರಿಸ್ಥಿತಿಯನ್ನು ಹತೋಟಿಯಲ್ಲಿಟ್ಟುಕೊಳ್ಳುವ ಸಾಮರ್ಥ್ಯ ಟ್ರಂಪ್ ಆಡಳಿತಕ್ಕೆ ಇದೆಯೇ ಎಂಬುದು ಈಗ ಎದ್ದಿರುವ ಪ್ರಶ್ನೆ. ಏಕೆಂದರೆ, ಕೆನಾಡಕ್ಕೋ-ಚೀನಾಕ್ಕೋ ಇಷ್ಟೆಲ್ಲ ಹೆಚ್ಚುವರಿ ಸುಂಕ ಹಾಕಿದೆ ಎಂದು ಬೀಗುವುದು ಸುಲಭ. ಆದರೆ, ಯಾವ ಕೆನಡಾ ಮತ್ತು ಚೀನಾಗಳಿಂದ ವಸ್ತುಗಳು ಆಮದಾಗುತ್ತಿದ್ದವೋ ಅವು ದುಬಾರಿಯಾದ ತಕ್ಷಣ ಅಮೆರಿಕದ ಬಳಕೆದಾರರ ನಡುವೆ ಹಾಹಾಕಾರ ಏರ್ಪಡುತ್ತದೆ. ಉದಾಹರಣೆಗೆ, ಪಕ್ಕದ ಕೆನಡಾದಿಂದ ವಾಹನದ ಬಿಡಿಭಾಗಗಳು ಉತ್ಪಾದನೆಯಾಗಿ ಬರುತ್ತಿದ್ದವೆಂಬ ಕಾರಣದಿಂದ ಅಮೆರಿಕದ ಕಂಪನಿಗಳು ತಾವು ಉತ್ಪಾದಿಸುವ ಕಾರಿನ ಬೆಲೆಯನ್ನು ಸ್ಪರ್ಧಾತ್ಮಕವಾಗಿಡುವುದಕ್ಕೆ ಸಾಧ್ಯವಾಗಿತ್ತು. ಈಗವನ್ನು ಕೆನಡಾದಿಂದ ತರಿಸಿಕೊಳ್ಳುವುದಕ್ಕೆ ದುಬಾರಿಯಾಗುತ್ತದೆ, ಹಾಗೆಂದು ಅಮೆರಿಕದಲ್ಲೇ ಉತ್ಪಾದನೆ ಎಂಬುದು ರಾತ್ರೋರಾತ್ರಿ ಸಾಧಿಸಬಿಡಬಹುದಾದ ಉಪಲಬ್ಧಿ ಅಲ್ಲ.
ಹೀಗಿರುವಾಗ ಅಮೆರಿಕದ ಬಳಕೆದಾರರಿಗೆ ಆರಂಭಿಕ ವರ್ಷಗಳಲ್ಲಂತೂ ಬಹುತೇಕ ವಸ್ತುಗಳ ಬೆಲೆ ಏರಿಯೇ ಏರುತ್ತದೆ. ಹಾಗಾದರೆ ಟ್ರಂಪ್, ಎಲಾನ್ ಮಸ್ಕ್ ಥರದ ವ್ಯಾಪಾರ ನಿಪುಣರು ಇವೆಲ್ಲದರ ಪರಿವೆ ಇಲ್ಲದೇ ನಿರ್ಧಾರ ತೆಗೆದುಕೊಂಡುಬಿಟ್ಟರಾ? ಅಷ್ಟು ಸರಳ ತೀರ್ಮಾನಕ್ಕೆ ಬರಲಾಗುವುದಿಲ್ಲ. ಏಕೆಂದರೆ ಖುದ್ದು ಟ್ರಂಪ್ ವ್ಯಾಪಾರ-ವಹಿವಾಟಿನ ಅನುಭವ ಇರುವವವರು. ಹಾಗಾದರೆ, ಸುಂಕ ಸಮರದ ಹಿಂದಿನ ಲೆಕ್ಕಾಚಾರ ಇಲ್ಲವೇ ಒತ್ತಡಗಳು ಬೇರೆಯವೇ ಆಗಿದ್ದಿರಬಹುದೇ? ಹಾಗೆಂದು ತರ್ಕಿಸುವುದಕ್ಕೂ ಅವಕಾಶವಿದೆ.
ವಸ್ತು ಉತ್ಪಾದಿಸಿ ಶ್ರೀಮಂತವಾಗಿಲ್ಲ ಅಮೆರಿಕ!
ಒಂದು ದೇಶ, ಅಷ್ಟೇ ಏಕೆ, ಒಬ್ಬ ವ್ಯಕ್ತಿಯ ಉದಾಹರಣೆಯನ್ನೇ ತೆಗೆದುಕೊಳ್ಳುವುದಾದರೆ ವ್ಯಕ್ತಿ ಅಥವಾ ಪ್ರದೇಶ ಸಿರಿವಂತ ಎನಿಸಿಕೊಳ್ಳುವುದಕ್ಕೆ ತುಳಿಯಬೇಕಿರುವ ಮಾರ್ಗ ಯಾವುದು? ಸರಳ ಉತ್ತರವೆಂದರೆ- ವಸ್ತು-ಸೇವೆಗಳ ಉತ್ಪಾದನೆ. ಅಂದರೆ, ಒಂದು ದೇಶವಾಗಲೀ, ಒಬ್ಬ ವ್ಯಕ್ತಿಯಾಗಲೀ ಏನನ್ನೆಲ್ಲ ಯಾವೆಲ್ಲ ಪ್ರಮಾಣಗಳಲ್ಲಿ ಬೇರೆಯವರಿಗೆ ಮಾರುವುದಕ್ಕೆ ಶಕ್ತರು ಎಂಬ ಆಧಾರದ ಮೇಲೆ ಆದಾಯದ ಹರಿವು ನಿಶ್ಚಯವಾಗುತ್ತದಲ್ಲವೇ?
ಚರಿತ್ರೆಯುದ್ದಕ್ಕೂ ಆರ್ಥಿಕ ಉತ್ತುಂಗ ಸಾಧಿಸಿದ ದೇಶಗಳ ವಿಚಾರದಲ್ಲಿ ಬಹುತೇಕ ಇದೇ ಅಂಶವನ್ನೇ ಕಾಣುತ್ತೇವೆ. ಭಾರತವು ಒಂದೊಮ್ಮೆ ಬಂಗಾರದ ಹಕ್ಕಿಯಾಗಿತ್ತು ಎಂಬ ಇತಿಹಾಸದ ಉದ್ಗಾರವನ್ನು ನೆನಪಿಸಿಕೊಳ್ಳುವಾಗಲೂ ಅಲ್ಲಿ ಕಾಣುವ ವಿವರವೇನೆಂದರೆ ಅವತ್ತಿಗೆ ಭಾರತವು ಬಹುದೊಡ್ಡ ರಫ್ತು ಸಾಮರ್ಥ್ಯದ ಸಾಮ್ರಾಜ್ಯವಾಗಿತ್ತು ಎಂಬುದು. ಮಸಾಲೆ ಪದಾರ್ಥಗಳು, ಬಟ್ಟೆ, ರತ್ನದಾಭರಣಗಳ ವ್ಯಾಪಾರದಲ್ಲಿ ಪ್ರಾಚೀನ ಭಾರತವೊಂದು ಪ್ರಭಾವಿ ನೆಲೆಯಾಗಿತ್ತು. ಇವನ್ನೆಲ್ಲ ಖರೀದಿಸುವುದಕ್ಕೆ ಗ್ರೀಕ್ ಮತ್ತು ರೋಮನ್ನರು ಅವತ್ತಿನ ಅವರ ಕರೆನ್ಸಿ ಆಗಿದ್ದ ನಾಣ್ಯಗಳನ್ನು ಕೊಡುತ್ತಿದ್ದರು.
ಈ ನಾಣ್ಯಗಳು ಬಂಗಾರ, ಬೆಳ್ಳಿಗಳಿಂದಾಗಿದ್ದು ಅದಕ್ಕೆ ತಕ್ಕ ಮೌಲ್ಯ ಹೊಂದಿರುತ್ತಿದ್ದವು. ಒಂದು ಹಂತದಲ್ಲಿ ಹೇಗಾಯಿತೆಂದರೆ, ಈ ಸಾಮ್ರಾಜ್ಯಗಳು ಹೊರಡಿಸಿದ್ದ ಹೆಚ್ಚಿನ ಲೋಹದ ಕರೆನ್ಸಿಗಳೆಲ್ಲ ಭಾರತದ ಬಳಿ ಜಮೆಯಾಗಿಹೋಗಿದ್ದವು. ಏಕೆಂದರೆ ಭಾರತವು ಅವತ್ತಿಗೆ ಆ ಮಟ್ಟಿಗಿನ ವ್ಯಾಪಾರ ಮಾಡುತ್ತಿತ್ತು! ಜಗತ್ತಿನ ಸಂಪತ್ತನ್ನೆಲ್ಲ ಭಾರತ ನುಂಗುತ್ತಿದೆ ಅಂತ ಅವತ್ತಿನ ಪಾಶ್ಚಾತ್ಯ ಇತಿಹಾಸಕಾರರು ಉಲ್ಲೇಖಿಸಿದ್ದಿದೆ.
ಇತ್ತೀಚಿನ ದಶಕಗಳಲ್ಲಿ ಚೀನಾ ಸಾಧಿಸಿರುವ ಆರ್ಥಿಕ ಪ್ರಗತಿ ಸಹ ಇದೇ ಹಾದಿಯದ್ದು. ಅದು ತನ್ನನ್ನು ತಾನು ಜಗತ್ತಿನ ಕಾರ್ಖಾನೆಯನ್ನಾಗಿ ರೂಪಿಸಿಕೊಂಡು, ಜಗತ್ತಿನ ಯಾವೆಲ್ಲ ಮಾರುಕಟ್ಟೆಗಳಲ್ಲಿ ಅವಕಾಶ ಸಿಕ್ಕಿತೋ ಅಲ್ಲೆಲ್ಲ ತನ್ನ ವಸ್ತುಗಳನ್ನು ಕಡಿಮೆ ಬೆಲೆಯಲ್ಲಿ ಬಿಕರಿಗಿರಿಸಿತು.
ಹೊಲಿದು ಮಾಡಿರುವ ಈ ಹಡಗು ಹೊರಟಿರುವುದಾದರೂ ಎಲ್ಲಿಗೆ? (ತೆರೆದ ಕಿಟಕಿ)ಇಪ್ಪತ್ತನೇ ಶತಮಾನದ ಪ್ರಾರಂಭ ಭಾಗದಲ್ಲಿ ಜಪಾನ್ ಮತ್ತು ಕೊರಿಯಾಗಳು ಪ್ರಮುಖ ಆರ್ಥಿಕ ಬಲವೆನಿಸಿದ್ದು ತಮ್ಮ ವಸ್ತು ಉತ್ಪಾದನೆ ಹಾಗೂ ಅವುಗಳ ರಫ್ತು ಸಾಮರ್ಥ್ಯದ ಮೂಲಕವೇ. ನಂತರ ಯುರೋಪಿನ ಪ್ರವರ್ಧಮಾನದ ವಿಷಯದಲ್ಲಿ ಈ ಪರಿಸ್ಥಿತಿ ಬದಲಾಗುತ್ತದೆ. ಅವತ್ತಿಗೆ ಯುರೋಪಿನ ದೇಶಗಳು ಕೈಗಾರಿಕಾ ಕ್ರಾಂತಿ ಸಾಧಿಸಿದ್ದವು ನಿಜ. ಆದರೆ ಅವುಗಳ ಸಂಪತ್ತು ಶೇಖರಣೆಯಾದದ್ದು ಬೇರೆ ದೇಶಗಳನ್ನು ವಸಾಹತುಗಳನ್ನಾಗಿಸುವ, ಸಮುದ್ರ ಮಾರ್ಗದ ವಹಿವಾಟಿನ ಮೇಲೆ ತಮ್ಮ ಅಂಕುಶ ಇರಿಸಿಕೊಳ್ಳುವ ಮೂಲಕ.
ಅಮೆರಿಕದ ಆರ್ಥಿಕ ಪ್ರವರ್ಧಮಾನದ ಮುಖ್ಯಾಂಶವನ್ನು ಗಮನಿಸಿ. ಅದಂತೂ ಬೇರೆ ದೇಶಗಳಿಗೆ ಹೆಚ್ಚಿನ ವಸ್ತುಗಳನ್ನು ರಫ್ತು ಮಾಡುವ ಮೂಲಕ ಆರ್ಥಿಕ ಪ್ರಗತಿ ಸಾಧಿಸಿದ್ದಲ್ಲವೇ ಅಲ್ಲ. ಇವತ್ತಿಗೆ, ಅಮೆರಿಕದ ರಕ್ಷಣಾ ಉದ್ಯಮವು ದೊಡ್ಡಮಟ್ಟದಲ್ಲಿ ವಸ್ತುಗಳನ್ನು ಮಾರುತ್ತದೆ ಹಾಗೂ ಅದರ ತಂತ್ರಜ್ಞಾನ ಕಂಪನಿಗಳು ಜಗತ್ತಿಗೆ ಸೇವೆಯನ್ನು ಮಾರುತ್ತಿವೆ ಎಂದು ವಾದಿಸಬಹುದಾದರೂ, ಒಟ್ಟಾರೆ ಅಮೆರಿಕದ ಏರುಗತಿಯು ರಫ್ತನ್ನು ಅವಲಂಬಿಸಿ ಆಗಿದ್ದೇ ಅಲ್ಲ.
ಎರಡನೇ ವಿಶ್ವಯುದ್ಧದ ನಂತರ ಸುಧಾರಿಸಿಕೊಳ್ಳುತ್ತಿದ್ದ ಜಗತ್ತಿನ ದೇಶಗಳೆದುರು ತನ್ನ ಡಾಲರ್ ಕರೆನ್ಸಿಯನ್ನು ಜಾಗತಿಕ ವಹಿವಾಟಿನ ಕರೆನ್ಸಿಯಾಗಿಸುವುದಕ್ಕೆ ಯಶ ಸಾಧಿಸಿದ್ದೇ ಅದರ ಆರ್ಥಿಕ ಉತ್ತುಂಗಕ್ಕೆ ಮುಖ್ಯ ಕಾರಣ. ಪ್ರಾರಂಭದಲ್ಲಿ ತನ್ನ ಕರೆನ್ಸಿಗೆ ಇಟ್ಟಿದ್ದ ಬಂಗಾರದ ಅಡಿಪಾಯವನ್ನೂ ಅಮೆರಿಕವು ಕೆಲ ದಶಕಗಳಲ್ಲೇ ತೆಗೆದುಬಿಟ್ಟಿತು. ಅಷ್ಟರಲ್ಲಾಗಲೇ ಜಗತ್ತು ಜಾಗತಿಕ ವಹಿವಾಟಿನಲ್ಲಿ ಡಾಲರ್ ಕರೆನ್ಸಿ ಉಪಯೋಗ ವ್ಯವಸ್ಥೆಯ ಒಳಗೆ ಸಿಲುಕಿಯಾಗಿತ್ತು. ಮುಂದೆ, ತೈಲ ಸಂಪನ್ಮೂಲದ ದೇಶಗಳು ಇಂಧನ ಮಾರುವುದಕ್ಕೆ ಸಹ ಡಾಲರ್ ಮಾನದಂಡ ಒಪ್ಪಿಕೊಂಡಾಗ ಜಗತ್ತು ಹೊರಬರಲಾಗದ ಅರ್ಥವ್ಯೂಹವೊಂದನ್ನು ಹೊಕ್ಕಿಬಿಟ್ಟಿತ್ತು.
ಇವೆಲ್ಲದರ ಪರಿಣಾಮ ಏನಾಯಿತೆಂದರೆ, ಅಮೆರಿಕವು ಧನಿಕನಾಗಿ ಉಳಿಯುವುದಕ್ಕೆ ಜಗತ್ತಿಗೆ ನಿರಂತರ ವಸ್ತು-ಸೇವೆಗಳನ್ನು ಉತ್ಪಾದಿಸಿ ಕೊಡಲೇಬೇಕಾದ ಒತ್ತಡಕ್ಕೆ ಸಿಲುಕಿಕೊಳ್ಳಲಿಲ್ಲ. ಜಾಗತಿಕ ವ್ಯವಹಾರಗಳೆಲ್ಲ ಡಾಲರುಗಳದ್ದೇ ಸಂಚಯವಾದ್ದರಿಂದ ಅದಕ್ಕೆ ಜಾಗತಿಕ ಮಾರುಕಟ್ಟೆಯಿಂದ ಸಾಲ ಎತ್ತುವುದು ಹಾಗೂ ಬೇಕಾದಾಗಲೆಲ್ಲ ಮತ್ತಷ್ಟು ಡಾಲರ್ ಕರೆನ್ಸಿಗಳನ್ನು ಮುದ್ರಿಸುವುದು ಸುಲಭವಾಯಿತು. ಈ ಹೊತ್ತಿಗೆ ಅಮೆರಿಕವು ಹೊಂದಿರುವ ಸಾಲ ಸುಮಾರು 34 ಟ್ರಿಲಿಯನ್ ಡಾಲರುಗಳಷ್ಟು. ಇದೆಷ್ಟು ದೊಡ್ಡ ಮೊತ್ತ ಎಂದರೆ ಅಮೆರಿಕದ ಜಿಡಿಪಿಯ ಶೇ.120 ಪಾಲು ಇದಾಗುತ್ತದೆ. ಒಂದೇ ವಾಕ್ಯದಲ್ಲಿ ಹೇಳುವುದಾದರೆ, ಪ್ರಾಯೋಗಿಕವಾಗಿ ಇಷ್ಟು ದೊಡ್ಡ ಸಾಲವನ್ನು ಮರುಪಾವತಿ ಮಾಡುವುದು ಅಸಾಧ್ಯ. ಅಮೆರಿಕದ ಇಡೀ ಅರ್ಥವ್ಯವಸ್ಥೆಯೇ 29 ಟ್ರಿಲಿಯನ್ ಡಾಲರ್ ಮೌಲ್ಯದ್ದು. ಹಾಗಂತ, ಬಹುತೇಕ ಕಾಗದದ ಮೇಲಿನ ಮೌಲ್ಯವಷ್ಟೇ ಆಗಿರುವ ಇದನ್ನು ಅಮೆರಿಕ ಮರುಪಾವತಿಸಲಿದೆ ಎಂದು ಯಾರೂ ಕಾಯ್ದು ಕುಳಿತಿಲ್ಲ. ಆದರೆ, ಪ್ರತಿವರ್ಷ ಬಡ್ಡಿಯನ್ನಾದರೂ ನೀಡಿ ಮರುಸಾಲದ ಪ್ರಕ್ರಿಯೆಗೆ ಹೋಗಬೇಕಲ್ಲ…ಹಾಗೆ ವಾರ್ಷಿಕವಾಗಿ ಬಡ್ಡಿ ವಿತರಿಸುವುದಕ್ಕೇ ಅಮೆರಿಕಕ್ಕೆ 1 ಟ್ರಿಲಿಯನ್ ಡಾಲರ್ ಹಣ ಬೇಕಾಗುತ್ತದೆ.
ಹೀಗೆ ಗಾಳಿಗೋಪುರದಲ್ಲಿ ತೇಲಾಡಿಕೊಂಡಿರುವ ಮೌಲ್ಯಾಂಕನದ ಆಟವು ಯಾವತ್ತಿಗಾದರೂ ಮುಗ್ಗರಿಸಲೇಬೇಕಲ್ಲವೇ? ಕೊನೆಗೂ ನೈಜ ಉತ್ಪಾದನೆ ಹಾಗೂ ನೈಜ ಬೇಡಿಕೆಗಳ ನೆಲೆಗೆ ಮರಳಲೇಬೇಕಾಗುತ್ತದಲ್ಲ? ಅದರ ಮುನ್ನುಡಿಯಂತೆ ಕಾಣುತ್ತಿವೆ ಟ್ರಂಪ್ ಪ್ರಯಾಸಗಳು. ಆದರೆ ಈಗಿರುವ ಪ್ರಶ್ನೆ ಎಂದರೆ, ಆಮದನ್ನೆಲ್ಲ ದೀರ್ಘಾವಧಿಗೆ ತಗ್ಗಿಸಿ ತನಗೆ ಬೇಕಿರುವುದನ್ನು ತನ್ನಲ್ಲೇ ಉತ್ಪಾದಿಸಿಕೊಳ್ಳುವುದಕ್ಕೆ ಬೇಕಿರುವ ಬೆವರನ್ನು ತೆರುವುದಕ್ಕೆ ಅಮೆರಿಕದ ಜನಸಮೂಹ ನಿಜಕ್ಕೂ ಸಿದ್ಧವಿದೆಯಾ ಎನ್ನೋದು!
ಭಾರತ ಮನನ ಮಾಡಿಕೊಳ್ಳಬೇಕಿರುವುದೇನನ್ನು?
ಈಗೊಂದು ನಾಲ್ಕು ಶತಮಾನಗಳ ಹಿಂದಿನವರೆಗೂ ಭಾರತವು ವಿಶ್ವದ ಮುಂಚೂಣಿ ಆರ್ಥಿಕ ಶಕ್ತಿಯಾಗಿತ್ತು ಎಂಬುದು ಭಾರತೀಯರು ಹೀಗೇ ಸುಮ್ಮನೇ ಹೇಳಿಕೊಳ್ಳುತ್ತಿರುವ ಸಂಗತಿಯೇನೂ ಅಲ್ಲ. ಆಂಗಸ್ ಮ್ಯಾಡಿಸನ್ ಎಂಬ ಬ್ರಿಟಿಷ್ ಅರ್ಥ ಪರಿಣತನು ಜಿಡಿಪಿ ಲೆಕ್ಕಾಚಾರವನ್ನು ಈ ಹಿಂದಿನ ಶತಮಾನಗಳಿಗೆ ಅನ್ವಯಿಸಿ ನಡೆಸಿರುವ ಸಂಶೋಧನೆ ಪ್ರಕಾರ, ಸಾಮಾನ್ಯ ಕಾಲ 1,700ರ ಹೊತ್ತಿಗೆ ಭಾರತವು ಜಗತ್ತಿನ ಒಟ್ಟಾರೆ ಜಿಡಿಪಿಯಲ್ಲಿ ಶೇ. 24.4ರ ಪಾಲು ಹೊಂದಿತ್ತು.
ಹಾಗಾದರೆ ಅವತ್ತಿಗೆ ಭಾರತದ ಅರ್ಥವ್ಯವಸ್ಥೆಯ ಮಾದರಿ ಸಂಪೂರ್ಣ ರಫ್ತು ಆಧರಿತವಾಗಿತ್ತೇ ಎಂಬ ಪ್ರಶ್ನೆಗೆ, ಆಂತರಿಕ ಹಾಗೂ ಬಾಹ್ಯ ಬೇಡಿಕೆಗಳ ಸಮನ್ವಯದ ವಸ್ತು ಉತ್ಪಾದನೆಗಳಿದ್ದವು ಎಂಬ ಉತ್ತರ ಬರುತ್ತದೆ. ಭಾರತವು ಕೃಷಿ ಪ್ರಧಾನ ದೇಶವಾಗಿತ್ತು ಎಂಬ ವಾಕ್ಯವನ್ನು ನಾವು ಕಂಠಪಾಠ ಮಾಡಿಕೊಂಡು ಬಂದೆವಲ್ಲ, ಅದಕ್ಕೆ ಸ್ವಲ್ಪ ಭಿನ್ನ ವಸ್ತುಸ್ಥಿತಿ ಇತ್ತು ಎಂಬುದೂ ಗೊತ್ತಾಗುತ್ತದೆ. ಕೃಷಿ ವ್ಯಾಪಕವಾಗಿದ್ದದ್ದು ಹೌದಾದರೂ ವ್ಯಾಪಾರ-ವಹಿವಾಟುಗಳು ಬೆನ್ನೆಲುಬಾಗಿದ್ದವು. ಜವಳಿ, ಮಸಾಲೆ ಪದಾರ್ಥ, ಸ್ಟೀಲ್, ಆಭರಣ ಇವೆಲ್ಲ ಮುಖ್ಯ ಮಾರಾಟದ ವಸ್ತುಗಳಾಗಿದ್ದರೆ, ವಿಕೇಂದ್ರಿತ ಮಾದರಿಯಲ್ಲಿ ಸಣ್ಣಪಟ್ಟಣಗಳು ಹಾಗೂ ಹಳ್ಳಿಗಳಲ್ಲಿದ್ದ ನೇಕಾರರು, ಬಟ್ಟೆಗೆ ಬಣ್ಣ ಹಾಕುವವರು, ಅಕ್ಕಸಾಲಿಗರು, ಕಮ್ಮಾರರು ಇವರೆಲ್ಲ ಉತ್ಪಾದಕ ವ್ಯವಸ್ಥೆಯಾಗಿದ್ದರು. ಸಹಜವಾಗಿ ಈ ವ್ಯವಸ್ಥೆ ಅವತ್ತಿನ ಮಹಿಳೆಯರಿಗೆ ತಾವು ಇದ್ದ ಕಡೆಯಿಂದಲೇ ಕೆಲಸದ ಪಡೆಯಲ್ಲಿ ಭಾಗವಹಿಸುವುದಕ್ಕೆ ಅವಕಾಶ ಮಾಡಿಕೊಟ್ಟಿತ್ತು.
ಭಾಷಾ ಬಿಕ್ಕಟ್ಟಿನ ವಾಗ್ವಾದಗಳ ನಡುವೆ ಬೇರುಗಳನ್ನು ತಡಕುತ್ತ… (ತೆರೆದ ಕಿಟಕಿ)ಹೀಗೆಲ್ಲ ಹರಡಿಕೊಂಡಿದ್ದ ಉತ್ಪಾದಕರನ್ನು ಒಂದು ಜಾಲದಲ್ಲಿ ಬೆಸೆಯುವ ಕೆಲಸ ಮಾಡಿದ್ದು ಆಗಿನ ವರ್ತಕ ಕೂಟಗಳು. ಮಣಿಗ್ರಾಮಮ್, ಐಯ್ಯಾವೊಲೆ (ಐಹೊಳೆ) 500 ಇತ್ಯಾದಿ ಕೂಟಗಳ ಬಗ್ಗೆ ಶಾಸನಾಧಾರಗಳೂ ಇವೆ. ಸಾಪ್ತಾಹಿಕ ಸಂತೆಗಳ ಮೂಲಕ ಆಂತರಿಕ ಮಾರುಕಟ್ಟೆಗೆ ವಸ್ತು ಉತ್ಪಾದನೆಗಳು ಪೂರೈಕೆಯಾಗುತ್ತಿದ್ದರೆ, ಉಳಿದವು ಬೇರೆ ಬೇರೆ ದೇಶಗಳಿಗೆ ಹೋಗುವುದಕ್ಕೆ ಅವತ್ತಿನ ಪ್ರಸಿದ್ಧ ಬಂದರುಗಳಾದ ತಾಮ್ರಲಿಪ್ತ, ಬರೂಚ್, ಕಲ್ಲಿಕೋಟೆ, ಮಚಲಿಪಟ್ಟಣಂ ಇತ್ಯಾದಿಗಳಿಗೆ ಪ್ರಯಾಣ ಬೆಳೆಸುತ್ತಿದ್ದವು. ಈ ವರ್ತಕ ಕೂಟಗಳಿಗೆ ದೊಡ್ಡಮಟ್ಟದಲ್ಲಿ ಹಣಕಾಸು ವ್ಯವಸ್ಥೆ ಒದಗಿಸಿ ಅವತ್ತಿನ ಕಾಲದ ಬ್ಯಾಂಕುಗಳಂತೆ ಕಾರ್ಯನಿರ್ವಹಿಸಿದ್ದು ದೇವಾಲಯ ವ್ಯವಸ್ಥೆ. ದೇಶದೆಲ್ಲೆಡೆ ಹರಡಿದ್ದ ದೇವಾಲಯಗಳು ಶ್ರದ್ಧಾಕೇಂದ್ರಗಳಂತೂ ಹೌದು, ಜತೆಯಲ್ಲೇ ಶಿಕ್ಷಣ, ಸಂಸ್ಕೃತಿ ಹಾಗೂ ಶಿಷ್ಟ ಮನೋರಂಜನೆ, ವ್ಯಾಪಾರಕ್ಕೆ ಸಾಲ ನೀಡುವಿಕೆ, ನೀರಾವರಿ ಸೇರಿದಂತೆ ಅಭಿವೃದ್ಧಿ-ಗ್ರಾಮ ವಿಕಾಸಗಳಿಗೆ ಹಣ ಒದಗಿಸುವ ಕೇಂದ್ರಗಳೂ ಆಗಿದ್ದವು. ಹಾಗೆಂದೇ ದೇವಾಲಯಗಳಲ್ಲಿ ದೊಡ್ಡ ಪ್ರಮಾಣದ ಬಂಗಾರವೂ ಸಂಚಯವಾಗಿರುತ್ತಿತ್ತು. ಮುಸ್ಲಿಂ ಆಕ್ರಮಣವು ಈ ವ್ಯವಸ್ಥೆಯನ್ನು ನೆಲಸಮ ಮಾಡಿತೆಂಬುದು ಹಾಗೂ ಅಳಿದುಳಿದ ಮಾದರಿಯನ್ನು ನಂತರದ 'ಸೆಕ್ಯುಲರ್' ರಾಜಕಾರಣ ಮುಗಿಸಿತೆಂಬುದು ಇತಿಹಾಸ.
ಹೀಗೊಂದು ಅರ್ಥವ್ಯವಸ್ಥೆಗೆ ಸೇನಾ ರಕ್ಷಣೆ ಒದಗಿಸುವಿಕೆ ಹಾಗೂ ವಿವಾದಗಳು ತಲೆದೋರಿದಾಗ ಅದನ್ನು ಬಗೆಹರಿಸುವ ನ್ಯಾಯಿಕ ಚೌಕಟ್ಟು ಒದಗಿಸುವ ಕೆಲಸವನ್ನಷ್ಟೇ ರಾಜಾಡಳಿತಗಳು ಮಾಡಿದ್ದವು. ಇವತ್ತಿನ ಆಶಯ ವಾಕ್ಯವಾದ 'ಮಿನಿಮಮ್ ಗವರ್ನಮೆಂಟ್, ಮ್ಯಾಕ್ಸಿಮಮ್ ಗವರ್ನೆನ್ಸ್' ಅನ್ನು ಅವು ಆಗ ಸಾಕಾರ ರೂಪದಲ್ಲೇ ಇರಿಸಿದ್ದವು.
ಟ್ರಂಪ್ ಹುಟ್ಟಿಸಿರುವ ಕಂಪನದಲ್ಲಿ ಜಗತ್ತಿನ ಅರ್ಥವ್ಯವಸ್ಥೆಯು ಮರು ನಿರೂಪಣೆಗೆ ಮುಖ ಮಾಡಿರುವ ಚರಿತ್ರೆಯ ಈ ವಿಶಿಷ್ಟ ಕಾಲವಿದು. ಈ ವೇಳೆ ನಮ್ಮ ಇತಿಹಾಸದ ಹೆಜ್ಜೆಗಳು ನಮಗೆ ತಿಳಿದಿರಬೇಕಲ್ಲವೇ?
- ಚೈತನ್ಯ ಹೆಗಡೆ
cchegde@gmail.com
Post a Comment