ಒಟ್ಟು 75 ಸದಸ್ಯರಿರುವ ವಿಧಾನ ಪರಿಷತ್ತಿನಲ್ಲಿ ನಾಲ್ವರು ಸದಸ್ಯರ ನೇಮಕದೊಂದಿಗೆ ಕಾಂಗ್ರೆಸ್ ಗೆ ಸರಳ ಬಹುಮತ ಲಭಿಸಲಿದೆ. ಸರ್ಕಾರ ಶಿಫಾರಸು ಮಾಡುವ ಹೆಸರುಗಳಿಗೆ ರಾಜ್ಯಪಾಲರು ಸಮ್ಮತಿ ನೀಡಿದ ನಂತರ ವಿಧಾನ ಪರಿಷತ್ತಿನ ಸಭಾಪತಿಯವರು ಈ ನಾಲ್ವರಿಗೆ ಸದಸ್ಯತ್ವದ ಪ್ರಮಾಣ ವಚನ ಬೋಧಿಸುವುದರೊಂದಿಗೆ ಅವರ ಸದಸ್ಯತ್ವದ ಆರು ವರ್ಷಗಳ ಅವಧಿ ಜಾರಿಗೆ ಬರುತ್ತದೆ. ಇದರೊಂದಿಗೆ ಸದನದಲ್ಲಿ ಕಾಂಗ್ರೆಸ್ ನ ಸದಸ್ಯರ ಸಂಖ್ಯಾ ಬಲವೂ ಈಗಿನ 33 ರಿಂದ 37 ಕ್ಕೆ ಏರುತ್ತದೆ. ಸಾಮಾನ್ಯವಾಗಿ ಹೆಚ್ಚು ಸಂದರ್ಭಗಳಲ್ಲಿ ಈ ರೀತಿ ಸರ್ಕಾರದಿಂದ ನಾಮಕರಣಗೊಳ್ಳುವ ಸದಸ್ಯರು ಆಡಳಿತ ಪಕ್ಷದ ಸದಸ್ಯರಾಗೇ ಗುರುತಿಸಿಕೊಳ್ಳುವುದು ಜಾರಿಯಲ್ಲಿರುವ ಸಹಜ ಪ್ರಕ್ರಿಯೆ. ಎಲ್ಲ ಕಾಲಕ್ಕೂ ಇದು ನಡೆದು ಬಂದಿರುವುದರಿಂದ ಇದೊಂದು ವಿಶೇಷವೇನೂ ಅಲ್ಲ.
ಸಾಮಾನ್ಯವಾಗಿ ವಿಧಾನಸಭೆಗೆ ಜನರ ಮತದಾನದ ಮೂಲಕ ನೇರ ಚುನಾವಣೆ ನಡೆದು ಸದಸ್ಯರು ಆಯ್ಕೆಗೊಂಡರೆ ವಿಧಾನ ಪರಿಷತ್ತಿನ ಸದಸ್ಯರ ಆಯ್ಕೆ ಪ್ರಕ್ರಿಯೆಯೇ ವಿಭಿನ್ನ. ಪದವೀಧರರು, ಶಿಕ್ಷಕರು , ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳಿಂದ ಹಾಗೂ ವಿಧಾನಸಭೆಯಿಂದ ಸದಸ್ಯರು ಆಯ್ಕೆಗೊಳ್ಳುತ್ತಾರೆ. ಇದರ ಜತೆಗೇ ಸರ್ಕಾರ ರಾಜಕಾರಣ ಹೊರತು ಪಡಿಸಿ ಕಲೆ, ಸಾಂಸ್ಕೃತಿಕ ಕ್ಷೇತ್ರ, ಸಮಾಜಸೇವೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ ಸಮಾಜಕ್ಕೆ ಕೊಡುಗೆ ನೀಡಿದವರನ್ನು ಸದಸ್ಯರಾಗಿ ನೇಮಕ ಮಾಡುತ್ತದೆ. ಈ ಕಾರಣಕ್ಕಾಗೇ ವಿಧಾನ ಪರಿಷತ್ತನ್ನು ಚಿಂತಕರ ಚಾವಡಿ ಎಂದೂ ಕರೆಯಲಾಗುತ್ತದೆ. ಇತಿಹಾಸದ ಪುಟಗಳನ್ನು ಅವಲೋಕಿಸಿದರೆ ವಿಧಾನಸಭೆಗಿಂತ ವಿಧಾನ ಪರಿಷತ್ ನಲ್ಲೇ ವಿವಿಧ ವಿಷಯಗಳ ಮೇಲೆ ಗಂಭಿರ ಹಾಗೂ ಗುಣಾತ್ಮಕ ಚರ್ಚೆಗಳು ನಡೆದದ್ದೇ ಜಾಸ್ತಿ.
ವಿಧಾನಸಭೆಯಲ್ಲಿ ಅಂಗೀಕಾರವಾಗುವ ವಿವಿಧ ವಿಧೇಯಕಗಳು ವಿಧಾನ ಪರಿಷತ್ತಿನಲ್ಲೂ ಒಪ್ಪಿಗೆ ಪಡೆಯುವುದು ಕಡ್ಡಾಯವಾಗಿರುವುದರಿಂದ ಈ ಸದನಕ್ಕೆ ಮಹತ್ವ ಇದೆ.
ಇವೆಲ್ಲವೂ ಸರಿ ಇತ್ತೀಚಿನ ದಶಕಗಳಲ್ಲಿ ಚಿಂತಕರ ಚಾವಡಿ ಆಗಬೇಕಾಗಿದ್ದ ವಿಧಾನ ಪರಿಷತ್ತು ರಾಜಕೀಯ ನಿರಾಶ್ರಿತರ ಪುನರ್ ವಸತಿ ತಾಣವಾಗಿ ಮಾರ್ಪಾಡಾಗಿರುವುದು ಸಮಸದೀಯ ವ್ಯವಸ್ಥೆಯ ದುರಂತ. ವಿಧಾನಸಭೆ ಚುನಾವಣೆಯಲ್ಲಿ ಸೋತವರು. ರಾಜಕೀಯ ಪಕ್ಷಗಳಿಗೆ ವಿವಿಧ ರೀತಿಯಲ್ಲಿ ನೆರವಾದ ಬಲಾಢ್ಯರು, ಯಾವುದೇ ಸೈದ್ಧಾಂತಿಕ ಅಥವಾ ವೈಚಾರಿಕ ಹಿನ್ನೆಲೆ ಇಲ್ಲದವರೂ ಸದಸ್ಯರಾಗಿ ನೇಮಕವಾಗುತ್ತಿದ್ದಾರೆ. ಸಂಖ್ಯಾಬಲದ ರಾಜಕಾರಣವೇ ಪ್ರಧಾನವಾಗುತ್ತಿರುವ ಇತ್ತೀಚಿನ ದಿನಮಾನಗಳಲ್ಲಿ ಪರಿಷತ್ ಸದಸ್ಯರ ಆಯ್ಕೆ ಪ್ರಕ್ರಿಯೆಯೇ ಒಂದು ಪ್ರಹಸನವಾಗಿದೆ. ಇದಕ್ಕೆ ಯಾವುದೇ ರಾಜಕೀಯ ಪಕ್ಷವೂ ಹೊರತಲ್ಲ.
ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಇತ್ತಿಚಿಗೆ ಪರಿಷತ್ತಿನ ಕಾರ್ಯಕಲಾಪಗಳು ಸಾಗುತ್ತಿರುವ ರೀತಿಯ ಬಗ್ಗೆ ಹಾಗೂ ಸದಸ್ಯರ ನಡವಳಿಕೆಯ ಬಗ್ಗೆ ಅತ್ಯಂತ ಬೇಸರದ ಮಾತುಗಳನ್ನಾಡಿದ್ದಾರೆ. ಅವರ ಮಾತುಗಳಲ್ಲಿ ಇಂದಿನ ರಾಜಕೀಯ ವ್ಯವಸ್ಥೇಯ ಬಗ್ಗೆಯೂ ಬೇಸರವಿದೆ. ಸುಮಾರು ನಾಲ್ಕು ದಶಕಗಳಿಂದ ವಿಧಾನ ಪರಿಷತ್ ಸದಸ್ಯರಾಗಿ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗುತ್ತಾ ಬಂದಿರುವ ಹೊರಟ್ಟಿ ರಾಮಕೃಷ್ಣ ಹೆಗಡೆ, ಎಸ್.ಆರ್. ಬೊಮ್ಮಾಯಿ, ದೇವೇಗೌಡರು, ಜೆ.ಎಚ್. ಪಟೇಲರಂಥ ಮುತ್ಸದ್ದಿ ನಾಯಕರ ರಾಜಕೀಯ ಗರಡಿಯಲ್ಲಿ ಪಳಗಿದವರು. ಆ ಕಾರಣಕ್ಕಾಗೇ ಇಂದಿನ ಬದಲಾಗುತ್ತಿರುವ ರಾಜಕೀಯ ವ್ಯವಸ್ಥೆಯ ಜತೆ ಹೊಂದಿಕೊಳ್ಳಲು ಮೌಲ್ಯಗಳ ಜತೆ ರಾಜಿ ಮಾಡಿಕೊಳ್ಳಲು ಅವರಿಗೆ ಕಷ್ಟವಾಗುತ್ತಿದೆ. ಈ ಕಾರಣಕ್ಕಾಗೇ ಹಲವಾರು ಬಾರಿ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವ ಇಂಗಿತವನ್ನೂ ವ್ಯಕ್ತಪಡಿಸಿದ್ದಾರೆ.
ಹಾಗೆ ನೋಡಿದರೆ ವಿವಾದಗಳಿಗೆ ಎಡೆ ಇಲ್ಲದಂತೆ ಸಭಾಪತಿಯಾಗಿ ವಿಧಾನ ಪರಿಷತ್ತಿನ ಕಲಾಪಗಳನ್ನು ನಿರ್ವಹಿಸಿದ ಹೆಗ್ಗಳಿಕೆಯೂ ಆವರದ್ದು. ಇತ್ತೀಚಿನ ದಿನಗಳಲ್ಲಿ ಕರ್ನಾಟಕ ಶಾಸಕಾಂಗ ವ್ಯವಸ್ಥೆಯಲ್ಲಿ ಪೀಠಾಧಿಕಾರಿಗಳ ಕಾರ್ಯ ನಿವರ್ಹಣೆ ಬಗ್ಗೆಯೇ ಬಹಿರಂಗ ಟೀಕೆಗಳು ಕೇಳಿ ಬರುತ್ತಿವೆ. ವಿಧಾನಸಭೆ ಆಥವಾ ವಿಧಾನ ಪರಿಷತ್ತಿನ ಸಭಾಧ್ಯಕ್ಷರು/ ಸಭಾಪತಿಯವರು ಆಡಳಿತ ಪಕ್ಷ ಅಥವಾ ಸದನದಲ್ಲಿ ಬಹುಮತ ಹೊಂದಿರುವ ಪಕ್ಷದಿಂದಲೇ ಆಯ್ಕೆಯಾದರೂ ಆ ಹುದ್ದೆಯನ್ನು ಸದನದಲ್ಲಿ ನಿರ್ವಹಿಸುವ ಸಂದರ್ಭದಲ್ಲಿ ಪಕ್ಷಾತೀತವಾಗಿ ನಡೆದುಕೊಳ್ಳಬೇಕು. ಕೆಲವೊಂದು ವಿರಳ ಪ್ರಕರಣಗಳಲ್ಲಿ ಮಾತ್ರ ಸಭಾಪತಿ ಹಾಗೂ ಸಭಾಧ್ಯಕ್ಷರ ಸ್ಥಾನಕ್ಕೆ ಆಯ್ಕೆಯಾದವರು ತಮ್ಮ ಪಕ್ಷಗಳ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ನಂತರ ಆ ಹುದ್ದೆಗಳಿಂದ ನಿರ್ಗಮಿಸಿದ ಮೇಲೆ ಮರಳಿ ಪಕ್ಷದ ಸದಸ್ಯತ್ವವನ್ನು ಪಡೆದ ಉದಾಹರಣೆಗಳಿವೆ. ಇದು ಕಾನೂನಿನ ಭಾಗವಲ್ಲವಾದರೂ ಸಂಸದೀಯ ಶಿಷ್ಟಾಚಾರದ ದೃಷ್ಟಿಯಿಂದ ಇಂತಹದೊಂದು ನಡವಳಿಕೆ ಪಾಲಿಸುವುದು ಉನ್ನತ ಮೌಲ್ಯಗಳನ್ನು ಕಾಪಾಡಿಕೊಳ್ಳುವುದರ ಸಂಕೇತ.
ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ಎ.ಕೆ. ಸುಬ್ಬಯ್ಯ, ಬಿ.ಬಿ.ಶಿವಪ್ಪ, ಡಿ.ಬಿ.ಚಂದ್ರೇಗೌಡ, ಕೆ.ಎಚ್. ಶ್ರೀನಿವಾಸ್, ಎಂ.ಸಿ. ನಾಣಯ್ಯರಂತಹ ಮೇಧಾವಿಗಳು ಸದಸ್ಯರಾಗಿ, ಪ್ರತಿ ಪಕ್ಷದ ನಾಯಕರುಗಳಾಗಿ, ಸದನದಲ್ಲಿ ಆಡಳಿತ ಪಕ್ಷದ ನಾಯಕರುಗಳಾಗಿ ಉನ್ನತ ಪರಂಪರೆ ಮೆರೆದಿದ್ದಾರೆ. ಅನೇಕ ಸಂದರ್ಭಗಳಲ್ಲಿ ಸರ್ಕಾರದ ಅನೇಕ ಹಗರಣಗಳನ್ನು ಬಯಲಿಗೆಳೆದು ಆಡಳಿತ ಪಕ್ಷವನ್ನು ಪೇಚಿಗೆ ಸಿಲುಕಿಸಿದ ಪ್ರಸಂಗಗಳಿಗೂ ಪರಿಷತ್ತು ಸಾಕ್ಷಿಯಾಗಿದೆ. ಆದರೆ ಇತ್ತೀಚಿನ ದಶಕಗಳಲ್ಲಿ ವಿಧಾನ ಪರಿಷತ್ತಿಗೆ ರಿಯಲ್ ಎಸ್ಟೇಟ್ ಧಣಿಗಳು, ದುಡ್ಡಿದ್ದವರು. ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳ ಅರಿವೇ ಇಲ್ಲದವರನ್ನು ರಾಜಕೀಯ ಪಕ್ಷಗಳು ಆಯ್ಕೆ ಮಾಡುತ್ತಾ ಬಂದಿವೆ. ಸಭಾಪತಿ ಹೊರಟ್ಟಿಯವರ ಬೇಸರಕ್ಕೆ ಇದೂ ಕಾರಣ. ಹೀಗಾಗಿ ವ್ಯವಸ್ಥೆಯನ್ನು ಹೇಗಿದೆಯೋ ಹಾಗೆ ಒಪ್ಪಿಕೊಂಡು ಮುಂದುವರಿಯುವುದು ಅವರ ಅಂತಃ ಸಾಕ್ಷಿಗೆ ಹಿಡಿಸದೇ ಇರುವುದೇ ಪದೇ ಪದೇ ರಾಜೀನಾಮೆ ಕುರಿತು ಬಹಿರಂಗವಾಗಿ ಅವರು ಇಂಗಿತ ವ್ಯಕ್ತಪಡಿಸಲು ಕಾರಣ . ಆದರೆ ಅಧಿಕಾರವೇ ಪ್ರಧಾನವಾದ ಇಂದಿನ ದಿನಗಳಲ್ಲಿ ಅವರ ಈ ನಿಲುವು ರಾಜಕೀಯ ಪಂಡಿತರ ಹಲವು ವ್ಯಂಗ್ಯೋಕ್ತಿಗಳಿಗೂ ದಾರಿ ಮಾಡಿಕೊಟ್ಟಿದೆ.
ರಾಜ್ಯ ವಿಧಾನ ಪರಿಷತ್ತಿನಲ್ಲಿ ಈಗ ಆಡಳಿತ ಕಾಂಗ್ರೆಸ್ ಪಕ್ಷ 33 ಸದಸ್ಯರ ಬಲವನ್ನು ಹೊಂದಿದ್ದರೆ ಮಾನ್ಯತೆ ಪಡೆದ ಪ್ರಮುಖ ಪ್ರತಿಪಕ್ಷವಾದ ಬಿಜೆಪಿ 29 ಸದಸ್ಯರನ್ನು , ಮತ್ತೊಂದು ಪ್ರತಿಪಕ್ಷ ಜಾತ್ಯತೀತ ಜನತಾದಳ 7 ಸದಸ್ಯರನ್ನು ಹೊಂದಿವೆ. ಸಚಿವ ಸತೀಶ್ ಜಾರಕಿಹೊಳಿಯವರ ಸಹೋದರ ಲಖನ್ ಜಾರಕಿಹೊಳಿ ಪಕ್ಷೇತರ ಸದಸ್ಯರಾಗಿದ್ದು ಸದ್ಯಕ್ಕೆ ಬಿಜೆಪಿಯನ್ನು ವಿಷಯಾಧಾರಿತವಾಗಿ ಬೆಂಬಲಿಸುತ್ತಿದ್ದಾರೆ.
ನಾಲ್ವರು ಸದಸ್ಯರ ನಾಮಕರಣದ ನಂತರ ಸದನದಲ್ಲಿ ಆಡಳಿತ ಪಕ್ಷದ ಬಲ 37 ಆಗಲಿದೆ. ಸಭಾಪತಿ ಹೊರಟ್ಟಿ ಬಿಜೆಪಿಯಿಂದ ಸದನಕ್ಕೆ ಆಯ್ಕೆಯಾಗಿದ್ದಾರೆ. ಉಪ ಸಭಾಪತಿ ಎಂ.ಕೆ. ಪ್ರಾಣೇಶ್ ಕೂಡಾ ಬಿಜೆಪಿ ಸದಸ್ಯರು. ಹೀಗಾಗಿ ಎರಡು ಪ್ರಮುಖ ಹುದ್ದೆಗಳು ಬಿಜೆಪಿ ಬಳಿ ಇವೆ. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡಿರುವುದರಿಂದ ಸಭಾಪತಿ ಸೇರಿದಂತೆ ಎರಡೂ ಪಕ್ಷಗಳ ಸದಸ್ಯರ ಒಟ್ಟು ಬಲ ಹಾಗೂ ಪಕ್ಷೇತರ ಸದಸ್ಯ ಲಖನ್ ಜಾರಕಿಹೊಳಿ ಅವರ ಬೆಂಬಲವೂ ಸೇರಿದರೆ ಪ್ರತಿಪಕ್ಷದ ಒಟ್ಟು ಸದಸ್ಯರ ಸಂಖ್ಯೆ 38 ಆಗಲಿದೆ.
ಹೈಕಮಾಂಡ್ ತಂತ್ರ: ಇಕ್ಕಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ (ಸುದ್ದಿ ವಿಶ್ಲೇಷಣೆ)
ಪ್ರಸ್ತುತ ಸನ್ನಿವೇಶದಲ್ಲಿ ಒಂದು ವೇಳೆ ಸಭಾಪತಿಯವರ ವಿರುದ್ಧ ಆಡಳಿತ ಪಕ್ಷ ತನ್ನ ಸಂಖ್ಯಾ ಬಲ ಬಳಸಿ ಅವಿಶ್ವಾಸ ನಿರ್ಣಯವನ್ನು ಸದನದಲ್ಲಿ ಮಂಡಿಸಿದರೆ ಆ ಸಂದರ್ಭದಲ್ಲಿ ಸಭಾಪತಿ ಆ ಕಲಾಪದ ಅಧ್ಯಕ್ಷತೆ ವಹಿಸುವಂತಿಲ್ಲ. ಉಪ ಸಭಾಪತಿಯವರು ಸಭಾಪತಿ ಪೀಠದಲ್ಲಿದ್ದು ಕಲಾಪವನ್ನು ನಿರ್ವಹಿಸಬೇಕಾಗುತ್ತದೆ. ಆ ಸಂದರ್ಭದಲ್ಲಿ ತಮ್ಮ ಹುದ್ದೆಯ ಕುರಿತಂತೆ ಅಂತಿಮ ನಿರ್ಣಯ ಆಗದ ಹೊರತೂ ಸಭಾಪತಿ ಹುದ್ದೆಯಲ್ಲಿರುವವರು ಸದನದಲ್ಲೂ ಸದಸ್ಯರ ಸ್ಥಾನದಲ್ಲಿ ಕುಳಿತು ಭಾಗವಹಿಸುವಂತಿಲ್ಲ. ಈ ಸನ್ನಿವೇಶದ ಲಾಭ ಪಡೆಯಲು ಕಾಂಗ್ರೆಸ್ ಆಲೋಚಿಸಿದೆ.
ಈ ಅಂಶವನ್ನು ಮನಗಂಡಿರುವ ಸಭಾಪತಿ ಬಸವರಾಜ ಹೊರಟ್ಟಿ ಹೊಸದಾಗಿ ನಾಮಕರಣಗೊಳ್ಳುವ ನಾಲ್ವರು ಸದಸ್ಯರಿಗೆ ಪ್ರಮಾಣವಚನ ಬೋಧಿಸಿ ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುವ ಚಿಂತನೆಯಲ್ಲಿದ್ದಾರೆ. ಅವಿಶ್ವಾಸ ನಿರ್ಣಯ ಮಂಡನೆಯಂತಹ ರಾಜಕೀಯ ಪ್ರಕ್ರಿಯೆಗೆ ಅವಕಾಶ ಕೊಡುವ ಬದಲು ಗೌರವಯುತವಾಗಿ ಸ್ಥಾನದಿಂದ ನಿರ್ಗಮಿಸುವುದು ಅವರ ಆಲೋಚನೆ.
ಈ ಎಲ್ಲ ಪ್ರಕಿಯೆಗಳು ತೆರೆಯ ಮರೆಯಲ್ಲಿ ನಡೆಯುತ್ತಿದೆಯಾದರೂ ಹೊಸದಾಗಿ ನಾಲ್ವರ ಸದಸ್ಯರ ನಾಮಕರಣ ಪ್ರಕ್ರಿಯೆ ಈಗಿನ ರಾಜಕೀಯ ಸನ್ನಿವೇಶದಲ್ಲಿ ಸುಲಭವಾಗಿ ನೆರವೇರುತ್ತದೆಯೆ? ಎಂಬುದು ಸದ್ಯದ ಪ್ರಶ್ನೆ. ಆಡಳಿತ ಕಾಂಗ್ರೆಸ್ ಪಕ್ಷದಲ್ಲಿ ಸದ್ಯಕ್ಕೆ ಕೇಳಿ ಬರುತ್ತಿರುವ ಹೆಸರುಗಳ ಪೈಕಿ ರಾಜ್ಯದ ಹಿರಿಯ ನಾಯಕ ಹಾಗೂ ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷರೂ ಆದ ಮಾಜಿ ಸಭಾಪತಿ ಡಾ. ಬಿ.ಎಲ್. ಶಂಕರ್ ಅವರ ಹೆಸರಿಗೆ ಮುಖ್ಯಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒಪ್ಪಿದ್ದಾರೆ ಎಂಬ ಮಾಹಿತಿ ಇದೆ.
ಕಾಂಗ್ರೆಸ್ ನ ಯಾವುದೇ ಗುಂಪುಗಳ ಜತೆಗೂ ಗುರುತಿಸಿಕೊಳ್ಳದ ಸಜ್ಜನ ರಾಜಕಾರಣಿ ಎಂದೇ ಹೆಸರಾದ ಶಂಕರ್ ಸಾಂಸ್ಕೃತಿಕ ಮತ್ತು ಹಲವು ವೈಚಾರಿಕ ಸಂಘಟನೆಗಳ ಜತೆಗೂ ಗುರುತಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ವಿಧಾನ ಪರಷತ್ ಸದಸ್ಯರಾಗಿ, ಸಚಿವರಾಗಿ, ಸಭಾಪತಿಯಾಗಿಯೂ ಕಾರ್ಯ ನಿರ್ವಹಿಸಿರುವ ಅವರಿಗೆ ಲೋಕನಾಯಕ ಜಯಪ್ರಕಾಶ್ ನಾರಾಯಣ್ ರವರ ಚಳವಳಿಯಲ್ಲಿ ಪಾಲ್ಗೊಂಡ ಹಿನ್ನಲೆಯೂ ಇದೆ. ಒಂದು ಬಾರಿ ಲೋಕಸಭಾ ಸದಸ್ಯರಾಗಿಯೂ ಅವರು ಕಾರ್ಯ ನಿರ್ವಹಿಸಿದ್ದಾರೆ. ಹೀಗಾಗಿ ಅವರ ಆಯ್ಕೆ ಸಗಮವಾಗಬಹುದು.
ಇನ್ನುಳಿದಂತೆ ಕೇಳಿಬರುತ್ತಿರುವ ಮೂರು ಹೆಸರುಗಳಲ್ಲಿ ರಾಜಕೀಯ ಹಿನ್ನೆಲೆ ಉಳ್ಳವರೇ ಹೆಚ್ಚು . ಇದರ ಜತೆಗೇ ಮುಖ್ಯಮಂತ್ರಿ ಸಿದ್ದರಾಮಯ್ಯ ,ಕೆಪಿಸಿಸಿ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವೆ ನೂತನ ಸದಸ್ಯರ ನಾಮಕರಣ ವಿಚಾರದಲ್ಲಿ ಪೂರ್ಣ ಸಹಮತ ಮೂಡಿಲ್ಲ.ಇದಲ್ಲದೇ ಎಲ್ಲವನ್ನೂ ಈ ಇಬ್ಬರು ನಾಯಕರ ವಿವೇಚನಾಧಿಕಾರಕ್ಕೆ ಬಿಡಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೂ ಸೇರಿದಂತೆ ಹೈಕಮಾಂಡ್ ನ ಯಾವ ನಾಯಕರೂ ಇಲ್ಲ. ನಾಲ್ಕು ಸ್ಥಾನಗಳಿಗೆ ಆಕಾಂಕ್ಷಿಗಳಾಗಿರುವವರ ಸಂಖ್ಯೆಯೇ ದೊಡ್ದದಿದೆ. ಹೀಗಾಗಿ ಮೂವರೂ ನಾಯಕರೂ ತಮ್ಮ ತಮ್ಮ ಬೆಂಬಲಿಗರಿಗೆ ಅವಕಾಶ ಕಲ್ಪಿಸುವ ಪಟ್ಟು ಹಿಡಿದಿದ್ದಾರೆ. ಇತ್ತೀಚೆಗೆ ದಿಲ್ಲಿಗೆ ತೆರಳಿದ್ದ ಸಿದ್ದ ರಾಮಯ್ಯನವರಿಗೆ ಹಿರಿಯ ಸಚಿವರು ಹಾಗೂ ಪಕ್ಷದ ಅಧ್ಯಕ್ಷರೊಂದಿಗೆ ಕುಳಿತು ಸಮಾಲೋಚನೆ ನಡೆಸಿ ನಾಮಕರಣ ಮಾಡಬಹುದಾದ ಸಂಭಾವಿತ ಸದಸ್ಯರ ಪಟ್ಟಿಯನ್ನು ಸಿದ್ಧ ಪಡಿಸಿ ಕಳಿಸಿ ನಂತರ ಆ ವಿಚಾರದಲ್ಲಿ ಪರಿಶೀಲಿಸಿ ಒಂದು ತೀರ್ಮಾನವನ್ನು ನಾವು ತೆಗೆದುಕೊಳ್ಳುತ್ತೇವೆ ಎಂದು ಖರ್ಗೆಯವರು ಸೂಚಿಸಿದ್ದಾರೆ.
ಇನ್ನೂ ಮೂಡದ ಒಮ್ಮತ:
ಈವರೆವಿಗಿನ ವರ್ತಮಾನಗಳ ಪ್ರಕಾರ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಈ ವಿಚಾರದಲ್ಲಿ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ. ಡಿ.ಕೆ.ಶಿವಕುಮಾರ್ ಸೂಚಿಸಿದ ಕೆಲವು ಹೆಸರುಗಳಿಗೆ ತಕರಾರು ತೆಗೆದಿರುವ ಸಿದ್ದರಾಮಯ್ಯ ಅವಕ್ಕೆ ಒಪ್ಪಿಗೆ ಸೂಚಿಸಿಲ್ಲ. ಹೀಗಾಗಿ ಈ ಕುರಿತು ಮೂಡಿರುವ ಬಿಕ್ಕಟ್ಟು ಹೈಕಮಾಂಡ್ ಮಧ್ಯ ಪ್ರವೇಶದ ನಂತರವೇ ಬಗೆಹರಿಯ ಬೇಕು.
ಬೆಂಬಲಿಸಿದವರೂ ದೂರ; ಬಂಡಾಯದ ಹಾದಿಯಲ್ಲಿ ಒಂಟಿಯಾದ ಯತ್ನಾಳ್ (ಸುದ್ದಿ ವಿಶ್ಲೇಷಣೆ)
ರಾಜ್ಯಪಾಲರ ನಡೆಯೆ ಕುತೂಹಲ:
ಇನ್ನುಳಿದಂತೆ ಸರ್ಕಾರ ಈ ವಿಚಾರದಲ್ಲಿ ಏನೇ ತೀರ್ಮಾನ ಮಾಡಿದರೂ ಅಂತಿಮವಾಗಿ ರಾಜ್ಯಪಾಲರ ಒಪ್ಪಿಗೆಗೆ ಆ ಪಟ್ಟಿಯನ್ನು ಕಳಿಸಬೇಕು. ಅವರು ಒಪ್ಪಿ ಸಹಿ ಹಾಕಿದ ನಂತರವೇ ಸದಸ್ಯರಾಗುವವರು ಪ್ರಮಾಣ ವಚನ ಸ್ವೀಕರಿಸಲು ಸಾಧ್ಯ. ಹಿಂದಿನ ಅನೇಕ ಸಂದರ್ಭಗಳಲ್ಲಿ ರಾಜ್ಯಪಾಲರು ಸರ್ಕಾರ ಕಳಿಸಿದ್ದ ಪಟ್ಟಿಯಲ್ಲಿ ಕೆಲವೊಂದು ಮಾರ್ಪಾಡುಗಳನ್ನು ಸೂಚಿಸಿ ಸಹಿ ಹಾಕದೇ ವಾಪಸು ಕಳಿಸಿರುವ ಉದಾಹರಣೆಗಳೂ ಇವೆ.
ಹಾಗೆಯೇ ಸರ್ಕಾರ ಕಳಿಸುವ ಈ ಪಟ್ಟಿಯನ್ನು ಇಂತಿಷ್ಟೇ ಅವಧಿಯೊಳಗೆ ರಾಜ್ಯಪಾಲರು ಒಪ್ಪಿ ಸಹಿ ಹಾಕಿ ಕಳಿಸಬೇಕೆಂಬ ಕಾನೂನೇನೂ ಇಲ್ಲ. ಹೀಗಾಗಿ ಸರ್ಕಾರ ಕಳಿಸುವ ಪಟ್ಟಿ ರಾಜ್ಯಪಾಲರ ನಿರ್ಧಾರವನ್ನು ಅವಲಂಬಿಸಿರುತ್ತದೆ. ಈಗಿನ ಸನ್ನಿವೇಶದಲ್ಲಿ ಕಳೆದ ಎರಡು ವರ್ಷಗಳಿಂದ ಸರ್ಕಾರ ಮತ್ತು ರಾಜಭವನದ ನಡುವೆ ನಡೆಯುತ್ತಿರುವ ಶೀತಲ ಸಮರವನ್ನು ಗಮನಿಸಿದರೆ ಪರಿಷತ್ತಿಗೆ ಸರ್ಕಾರ ಶಿಫಾರಸು ಮಾಡುವ ಸದಸ್ಯರ ಪಟ್ಟಿ ಸುಲಭ ಸಾಧ್ಯಕ್ಕೆ ಅಂಗೀಕಾರವಾಗುವುದು ಅನುಮಾನ.
-ಯಗಟಿ ಮೋಹನ್
Post a Comment